ಬೆಂಗಳೂರು,ಅ.16-ಈಶ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ದೂರು ದಾಖಲಿಸಲಾಗಿದೆ
ಸದ್ಗುರು ಸಾರ್ವಜನಿಕವಾಗಿ ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶನ ಮಾಡುವ ಮೂಲಕ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಇತ್ತೀಚೆಗೆ ಚಿಕ್ಕಬಳ್ಳಾಪುರದ ಜಾಲಾರಿ ನರಸಿಂಹ ಬೆಟ್ಟದ ಬಳಿಯ ಈಶ ಯೋಗ ಕೇಂದ್ರದಲ್ಲಿ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಕೇರೆ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು.
ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಆಕ್ಷೇಪಿಸಿ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.
ಹಾವಿನ ಅಕ್ರಮ ಸಾಗಣೆ ಮಾಡಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ (ಎಸ್‍ಪಿಸಿಎ) ಸದಸ್ಯರು ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ವೇಳಾಪಟ್ಟಿ-2ರಡಿ ಹಾವು ಪಟ್ಟಿ ಮಾಡಲಾಗಿದ್ದು, ಇದರ ಡಿಎಫ್‍ಐಆರ್ ದಾಖಲಿಸಬೇಕು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಕ್ಟೋಬರ್ 9 ಮತ್ತು 10ರಂದು ಸದ್ಗುರು ಹಾವನ್ನು ಪ್ರದರ್ಶಿಸಿದ್ದು, ಈ ಉರಗವನ್ನು ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿಲ್ಲ ಎಂದು ಸದಸ್ಯರು ದೂರಿನಲ್ಲಿ ಆರೋಪಿಸಿದ್ದಾರೆ.
ದೂರು ಸದ್ಗುರು ವಿರುದ್ಧ ಅಲ್ಲ, ಆದರೆ ಅವರು ಅನೇಕ ಅನುಯಾಯಿಗಳನ್ನು ಹೊಂದಿರುವುದರಿಂದ ಅವರು ಜವಾಬ್ದಾರರಾಗಿರಬೇಕು ಮತ್ತು ಇತರರು ಅದೇ ರೀತಿ ಮಾಡಲು ಸೂರ್ತಿಯಾಗಿ ತೆಗೆದುಕೊಳ್ಳಬಾರದು ಎಂದಿದ್ದಾರೆ.
Previous Articleಉಪನ್ಯಾಸಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ
Next Article ರಸ್ತೆಯಲ್ಲಿ ಯಮನ ಅಟ್ಟಹಾಸ!