ಬೆಂಗಳೂರು- ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ
ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಬಗೆದಷ್ಟು ಆಳವಾಗುತ್ತಿದೆ.ಅತ್ಯಂತ ಸವಾಲೆನಿಸಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಅಕ್ರಮದ ಬುಡಕ್ಕೆ ಕೈ ಹಾಕಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾರೆಂದು ಶಂಕಿಸಲಾದ ಸುಮಾರು 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ.
ಭೂಗೋಳಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಯ 18 ಪ್ರಶ್ನೆಗಳು ಸೋರಿಕೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಲ್ಲೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ
ಪ್ರೊ. ಎಚ್. ನಾಗರಾಜ್ ಹಾಗೂ ಅತಿಥಿ ಉಪನ್ಯಾಸಕಿ ಆರ್. ಸೌಮ್ಯಾ ಅವರನ್ನು ಬಂಧಿಸಿ ಅವರಿಂದ ಅನೇಕ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಬೆಳವಣಿಗೆ ನಡುವೆಯೇ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ್ದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲು ತಯಾರಿ ನಡೆಸಿದೆ
ಇದೀಗ ಅಂತಿಮ ಅರ್ಹತಾ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳ ಮೇಲೆ ಅನುಮಾನ ವ್ಯಕ್ತಪಡಿಸಿರುವ ಸಿಸಿಬಿ ಪೊಲೀಸರು, ಅವರೆಲ್ಲರನ್ನೂ ಒಬ್ಬೊಬ್ಬರಾಗಿ ವಿಚಾರಣೆ ಮಾಡುತ್ತಿದ್ದಾರೆ.
ಅಭ್ಯರ್ಥಿಗಳ ಹಿನ್ನೆಲೆ, ಶೈಕ್ಷಣಿಕ ಪ್ರಗತಿ ಹಾಗೂ ಇತರೆ ಮಾಹಿತಿಗಳನ್ನು ವಿಚಾರಣೆ ವೇಳೆ ದಾಖಲಿಸಿಕೊಳ್ಳಲಾಗುತ್ತಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ, ಕಾನೂನು, ಸಮಾಜ ಕಾರ್ಯ, ಭೂಗೋಳ, ಭೂ ಗರ್ಭ ವಿಜ್ಞಾನ, ವಾಣಿಜ್ಯ, ನಿರ್ವಹಣಾ ವಿಜ್ಞಾನ, ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೈವಿಕ ರಸಾಯನ ವಿಜ್ಞಾನ, ಪ್ರಾಣಿ ವಿಜ್ಞಾನ, ಸಸ್ಯ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ, ಸಂಖ್ಯಾ ವಿಜ್ಞಾನ ಹಾಗೂ ಫ್ಯಾಷನ್ ತಂತ್ರಜ್ಞಾನ ವಿಷಯದ ಹಲವು ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿದೆ.
Previous Articleಕಬ್ಬಿನ ಬೆಲೆ ನಿರ್ಧಾರದ ಅಧಿಕಾರ CMಗೆ
Next Article ಸದ್ಗುರು ಜಗ್ಗಿ ವಿರುದ್ಧ ದೂರು