ಬೆಂಗಳೂರು, ಮೇ.24-
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ವಿಧಾನಪರಿಷತ್ತಿನ ಹಲವು ಸದಸ್ಯರು ನಿವೃತ್ತಿಯಾಗಿದ್ದು ಇದಕ್ಕೆ ನೇಮಕಗೊಳ್ಳಲು ಕಾಂಗ್ರೆಸ್ ನಲ್ಲಿ ದೊಡ್ಡ ಪೈಪೋಟಿ ಆರಂಭವಾಗಿದೆ.
ವಿಧಾನಸಭೆಯಿಂದ ನಾಮಕರಣಗೊಂಡಿದ್ದ ಕೊಂಡಜ್ಜಿ ಮೋಹನ್ ಸಿಎಂ ಲಿಂಗಪ್ಪ ಮತ್ತು ಪಿ ಆರ್ ರಮೇಶ್ ಅವರ ಅಧಿಕಾರಾವಧಿ ಪೂರ್ಣಗೊಂಡಿದೆ. ಇವರೊಂದಿಗೆ ವಿಧಾನಸಭೆಯಿಂದ ನೇಮಕವಾಗಿದ್ದ ಲಕ್ಷ್ಮಣ ಸವದಿ ಮತ್ತು ಬಾಬುರಾವ್ ಚಿಂಚನಸೂರು ಅವರ ರಾಜೀನಾಮೆಯಿಂದ ಎರಡು ಸ್ಥಾನಗಳು ಖಾಲಿಯಾಗಿದೆ.
ಒಟ್ಟಾರೆ ಪರಿಷತ್ತಿನಲ್ಲಿ ಖಾಲಿಯಾದ 5 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಲಭಿಸಲಿದೆ ಈ 5 ಸ್ಥಾನಗಳನ್ನು ತಕ್ಷಣವೇ ಭರ್ತಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಈ ಮೂಲಕ ವಿಧಾನ ಪರಿಷತ್ತಿನಲ್ಲೂ ಬಹುಮತ ಗಳಿಸುವುದು ಕಾಂಗ್ರೆಸ್ಸಿನ ಉದ್ದೇಶವಾಗಿದೆ.
ಹೀಗಾಗಿ ಯಾವುದೇ ಕ್ಷಣದಲ್ಲಿ ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕೆ ನೇಮಕಾತಿಗೊಳ್ಳಲು ಕಾಂಗ್ರೆಸ್ ನಾಯಕರ ದೊಡ್ಡಪಡೆ ಸಜ್ಜುಗೊಂಡಿದೆ.
ಚುನಾವಣೆಯ ಸೇರಿದಂತೆ ಹಲವು ಸಮಯದಲ್ಲಿ ಪಕ್ಷದ ನಿಲುವನ್ನು ಸಮರ್ಥಿಸುವ ಹಾಗೂ ಪಕ್ಷದ ಪರ ವಾದ ಮಂಡನೆಯಲ್ಲಿ ತೊಡಗಿರುವ ವಕ್ತಾರರುಗಳಿಗೆ
ಇಂತಹ ನೇಮಕಾತಿಯ ಸಮಯದಲ್ಲಿ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಅಭಿಪ್ರಾಯಪಟ್ಟಿದೆ ಈ ವಿಷಯವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೆವಾಲಾ ಈಗಾಗಲೇ ಬಹಿರಂಗಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ ಹಲವು ವಕ್ತಾರರು ತಮಗೆ ಅವಕಾಶ ಲಭಿಸಲಿದೆ ಎಂದು ಭಾವಿಸಿರುವಾಗಲೇ ಏಕಾಏಕಿ ಹೊಸದಾಗಿ ಕೆಲವರು ವಕ್ತಾರರು ಕೆಲಸ ಆರಂಭಿಸಿದ್ದಾರೆ.
ಸದ್ಯ ಭರ್ತಿ ಆಗಬೇಕಾಗಿರುವ ಐದು ಸ್ಥಾನಗಳಲ್ಲಿ ಒಂದು ಸ್ಥಾನ ಮತ್ತೆ ಬಾಬುರಾವ್ ಚಿಂಚನಸೂರು ಅವರಿಗೆ ಲಭಿಸಲಿದೆ ಎನ್ನಲಾಗಿದೆ ಉಳಿದ ನಾಲ್ಕು ಸ್ಥಾನಗಳಿಗಾಗಿ ಪಿ.ಆರ್. ರಮೇಶ್, ಸಿಎಂ ಲಿಂಗಪ್ಪ ಮರು ಆಯ್ಕೆ ಬಯಸಿ ಲಾಭಿ ನಡೆಸಿದ್ದಾರೆ.
ಮತ್ತೊಂದೆಡೆ ಪಕ್ಷದ ಮಾಧ್ಯಮ ವಿಭಾಗ ನೋಡಿಕೊಳ್ಳುತ್ತಿರುವ ಮನ್ಸೂರ್ ಅಲಿ ಖಾನ್ ರಮೇಶ್ ಬಾಬು ಮತ್ತು ನಟರಾಜ ಗೌಡ ಅವರ ಹೆಸರುಗಳು ವಕ್ತಾರ ವಲಯದಿಂದ ಕೇಳಿ ಬರುತ್ತಿವೆ.
ಇದಲ್ಲದೆ ಹಿರಿಯ ನಾಯಕ ಬೋಸರಾಜು, ಪ್ರೊ. ರಾಧಾಕೃಷ್ಣ, ವಿಜಯ್ ಹುನಗುಂದ, ಸೇರಿದಂತೆ ಹಲವು ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿವೆ.
ಈ ನಡುವೆ ವಕ್ತಾರರಿಗೆ ಕೆಲವು ಹುದ್ದೆ ಸಿಗಲಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಕೆಲವು ಹಿರಿಯ ನಾಯಕರು ಏಕಾಏಕಿ ವಕ್ತಾರರ ಕೆಲಸ ಆರಂಭಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಚಕಾರ ಎತ್ತದೆ ಮೌನಕ್ಕೆ ಶರಣಾಗಿದ್ದ ಈ ನಾಯಕರು ಇದೀಗ ಏಕಾಏಕಿ ಪ್ರತ್ಯಕ್ಷರಾಗಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಮುಗಿಬೀಳುವ ಮೂಲಕ ಹೈಕಮಾಂಡ್ ಗಮನ ಸೆಳೆಯಲು ಮುಂದಾಗಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ಬದಾಮಿ, ಕೊಪ್ಪಳ,ಹರಿಹರ ಮತ್ತು ಬೆಂಗಳೂರಿನ ಹೆಬ್ಬಾಳ ಸೇರಿದಂತೆ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿ ಟಿಕೆಟ್ ಕೇಳಿದ ಮಾಜಿ ಸಚಿವ ಎಚ್.ಎಂ.ರೇವಣ್ಣ ಆನಂತರ ತಮಗೆ ಟಿಕೆಟ್ ನೀಡಲಿಲ್ಲ ಎಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ವಿರುದ್ಧ ಕಿಡಿಕಾರಿ ಅಸಮಾಧಾನ ತೋಡಿಕೊಂಡಿದ್ದರು.
ಅದರಂತೆ ಹಿರಿಯ ನಾಯಕ ವಿಎಸ್ ಉಗ್ರಪ್ಪ ಅವರು ಬಳ್ಳಾರಿಯ ಕೂಡ್ಲಿಗಿ ಬಳ್ಳಾರಿ ಗ್ರಾಮೀಣ ಮೊಳಕಾಲ್ಮೂರು ಅಥವಾ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಟಿಕೆಟ್ ಬಯಸಿದ್ದರು ಆದರೆ ಈಗಾಗಲೇ ಅಲ್ಲಿ ಕಾಂಗ್ರೆಸ್ ಶಾಸಕರು ಇರುವ ಕಾರಣ ತಮಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು.
ಇದೀಗ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಏಕಾಏಕಿ ಸಕ್ರಿಯವಾಗಿರುವ ಈ ಇಬ್ಬರು ನಾಯಕರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ