ಬೆಂಗಳೂರು,ಸೆ.26-
ನಿವೇಶನ ಹಂಚಿಕೆ ಅಕ್ರಮ ಆರೋಪದ ಸುಳಿಗೆ ಸಿಲುಕಿ ತತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಎದುರಾಗಿರುವ ಕಂಟಕ ನಿವಾರಣೆಗೆ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿರುವ ಬೆನ್ನೆಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ ಕಿವಿಮಾತು ಸಿಎಂ ಅವರ ಆತ್ಮಬಲವನ್ನು ಹೆಚ್ಚುವಂತೆ ಮಾಡಿದೆ.
ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿದಾಗ ರಾಹುಲ್ ಗಾಂಧಿ ಕಳೆದೊಂದು ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯ ಅಕ್ರಮ ಆರೋಪದ ಹೆಸರಲ್ಲಿ ನಡೆದಿರುವ ವಿದ್ಯಮಾನಗಳು ಕೋರ್ಟ್ ನೀಡಿರುವ ತೀರ್ಪು ಹಾಗೂ ಕಾಂಗ್ರೆಸ್ ನಾಯಕರ ನಡವಳಿಕೆ ಕುರಿತಾಗಿ ಮಾಹಿತಿ ಪಡೆದುಕೊಂಡ ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಎದೆಗುಂದದೆ ಮುನ್ನಡೆಯುವಂತೆ ಸಲಹೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ನಿವೇಶನ ಹಂಚಿಕೆ ಆಕ್ರಮ ಎನ್ನುವುದು ಸಂಪೂರ್ಣ ರಾಜಕೀಯ ಪ್ರೇರಿತ ಬೆಳವಣಿಗೆಯಾಗಿದೆ ರಾಜಭವನ ಮತ್ತು ನ್ಯಾಯಾಂಗವನ್ನು ಬಳಸಿಕೊಂಡು ನಿಮ್ಮ ವರ್ಚಸ್ಸಿಗೆ ಧಕ್ಕೆ ತರಲು ಬಿಜೆಪಿ ಮತ್ತು ಜೆಡಿಎಸ್ ವ್ಯವಸ್ಥಿತ ಪಿತೂರಿ ಮಾಡಿದ್ದು ಇದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಸಲಹೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಈ ವಿದ್ಯಮಾನಗಳ ನಂತರ ನೀವು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ತಕ್ಷಣವೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಆಡಳಿತ ಯಂತ್ರಕ್ಕೆ ಚುರುಕು ನೀಡುವ ಜೊತೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು ಪಕ್ಷ ಸಂಘಟನೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವಂತೆ ಸೂಚಿಸಿದರು ಎಂದು ಗೊತ್ತಾಗಿದೆ.
ಸರ್ಕಾರದ ಮತ್ತು ಖಾಸಗಿ ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಇಂತಹ ಸಭೆಗಳನ್ನು ಆಯೋಜಿಸಿ ಅವುಗಳನ್ನು ಮುಂದೂಡಬಾರದು ಪ್ರತಿನಿತ್ಯ ಕನಿಷ್ಠ ಮೂರು ಸಭೆಗಳಲ್ಲಾದರೂ ತೊಡಗಬೇಕು ಈ ಮೂಲಕ ಇಂತಹ ಆರೋಪಗಳಿಂದ ತಾವು ವಿಚಲಿತರಾಗಿಲ್ಲ ಎಂಬ ಸಂದೇಶ ರವಾನಿಸುವಂತೆ ಕಿವಿ ಮಾತು ಹೇಳಿದರೆಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಭರಾಟೆ ಪ್ರವಾಸ ಕೈಗೊಳ್ಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಅಭಿವೃದ್ಧಿ ವಿರೋಧಿಗಳಾಗಿದ್ದಾರೆ ಹಿಂದುಳಿದ ವರ್ಗಗಳ ವಿರೋಧಿ ಎಂಬುದನ್ನು ಮನದಟ್ಟು ಮಾಡಬೇಕು ತಮ್ಮ ವಿರುದ್ಧ ಎಣೆದಿರುವ ರಾಜಕೀಯ ಪಿತೂರಿಯ ಬಗ್ಗೆ ಎಳೆ ಎಳೆಯಾಗಿ ವಿವರಿಸುವ ಮೂಲಕ ಜನತೆ ಈ ಪಕ್ಷಗಳ ವಿರುದ್ಧ ತಿರುಗಿ ಬೀಳುವಂತೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಆಡಳಿತ ಯಂತ್ರಕ್ಕೆ ಚುರುಕು ನೋಡುವ ದೃಷ್ಟಿಯಿಂದ ಜಿಲ್ಲಾವಾರು ಪ್ರಗತಿ ಪರಿಶೀಲನೆ, ಜನಸ್ಪಂದನ ಸಭೆಯ ಜೊತೆಗೆ ಕಾರ್ಯಕರ್ತರ ಸಮಾವೇಶಗಳನ್ನು ನಡೆಸುವ ಮೂಲಕ ಇನ್ನಷ್ಟು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿರುವುದಾಗಿ ಮುಖ್ಯಮಂತ್ರಿಗಳ ಆಪ್ತ ವಲಯಗಳು ತಿಳಿಸಿವೆ.
ತಮ್ಮ ವಿರುದ್ಧ ನಡೆದಿರುವ ರಾಜಕೀಯ ಪಿತೂರಿಯ ಬಗ್ಗೆ ಹೈಕಮಾಂಡ್ ಗೆ ಸ್ಪಷ್ಟ ಅರಿವಿದೆ ಹೀಗಾಗಿ ಯಾವುದೇ ಕಾರಣಕ್ಕೂ ಹೈಕಮಾಂಡ್ ಮಟ್ಟದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದ್ದಾರೆನ್ನಲಾಗಿದೆ