ಬೆಂಗಳೂರು,ಡಿ.14-
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಬಿಜೆಪಿ ನಾಯಕ ಸಿಟಿ ರವಿ ಅವರ ಆಕ್ಷೇಪಾರ್ಹ ಪದ ಬಳಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
ವಿಧಾನ ಪರಿಷತ್ ನಲ್ಲಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತು ಸಿಟಿ ರವಿ ಅವರು ಬಳಸಿದ ಶಬ್ದ ಹಾಗೂ ಆ ನಂತರದಲ್ಲಿ ನಡೆದ ಎಲ್ಲಾ ವಿದ್ಯಮಾನಗಳ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಸಿಟಿ ರವಿ ಪ್ರಕರಣದ ತನಿಖೆ ಈಗಷ್ಟೇ ಆರಂಭವಾಗಬೇಕಿದೆ. ವಿಚಾರಣೆ ಹಂತದಲ್ಲಿರುವ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ತಪ್ಪು. ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಲಿದ್ದಾರೆ ಎಂದು ಹೇಳಿದರು
ವಿಧಾನಪರಿಷತ್ ಸಭಾಪತಿ ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ನಾವು ಸಾಕ್ಷಿಗಳನ್ನು ಪರಿಶೀಲಿಸಬೇಕಾಗಿರುವುದರಿಂದ ಘಟನೆ ನಡೆದ ಸ್ಥಳದ ಮಹಜರು ಮಾಡಲು ಅವಕಾಶ ಕೇಳಲಾಗಿತ್ತು ಅವಕಾಶ ನೀಡುವುದು ವಿಳಂಬವಾದರೆ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸುವುದು ವಿಳಂಬವಾಗಲಿದೆ ಎಂದು ವಿವರಿಸಿದರು
ಪ್ರಕರಣ ಸಾಕಷ್ಟು ಸೂಕ್ಷ್ಮತೆಯನ್ನು ಒಳಗೊಂಡಿದ್ದು, ಎಲ್ಲಾ ಸಾಕ್ಷ್ಯಾಧಾರಗಳನ್ನು ಪೊಲೀಸರು ಕುಲಂಕೂಷವಾಗಿ ಪರಿಶೀಲನೆ ನಡೆಸಬೇಕಾಗುತ್ತದೆ. ಹೀಗಾಗಿ ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಅತ್ಯಂತ ಜಾಗರೂಕರಾಗಿ ಹೆಜ್ಜೆ ಇಡಲಿದ್ದಾರೆ ಎಂದು ತಿಳಿಸಿದರು.
ಸಭಾಪತಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತನಿಖೆಗೆ ಎಲ್ಲಾ ರೀತಿಯ ಸಹಕಾರ ದೊರೆಯಲಿದೆ ಎಂಬ ಭರವಸೆ ಇರುವುದಾಗಿ ಗೃಹ ಸಚಿವರು ನುಡಿದರು. “ಸಿಟಿ ರವಿ ಪ್ರಕರಣ ಮುಗಿದ ಅಧ್ಯಾಯ..” ಎಂಬ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೇಳಿಕೆಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದೂ ಡಾ.ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.
Previous Articleಸಂಸದ ಡಿ.ಕೆ. ಸುರೇಶ್ ಸೋದರಿ ಹೆಸರಲ್ಲಿ ಪಂಗನಾಮ.
Next Article ಪಾರ್ಟಿ ಹೆಸರಲ್ಲಿ ಖದೀಮರ ಕರಾಮತ್ತು.