ಹೈದರಾಬಾದ್,ಜೂ.30-ಸಂಗಾರೆಡ್ಡಿ ಜಿಲ್ಲೆಯ ಪತಂಚೇರುವಿನ ಪಾಶಮೈಲಾರಂನಲ್ಲಿರುವ ಕೈಗಾರಿಕಾ ಎಸ್ಟೇಟ್ನಲ್ಲಿ ಭಾರೀ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡು 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 20 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಗಾಚಿ ರಾಸಾಯನಿಕ ಇಂಡಸ್ಟ್ರಿಯಲ್ಲಿ ರಿಯಾಕ್ಟರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಅದರಲ್ಲಿ ಸಿಲುಕಿದ ಗಾಯಾಳುಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕಿತ್ಸೆ ವೇಳೆ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಸ್ಫೋಟದ ತೀವ್ರತೆಗೆ ಕಾರ್ಮಿಕರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಉತ್ಪಾದನಾ ವಿಭಾಗವಿದ್ದ ಕಟ್ಟಡವೂ ಕುಸಿದು ಬಿದ್ದಿದೆ. ಹಾಗೇ ಇನ್ನೊಂದು ಕಟ್ಟಡಕ್ಕೂ ಹಾನಿಯಾಗಿದೆ.
ಇನ್ನೂ ಕೆಲವರು ಇಂಡಸ್ಟ್ರಿಯಲ್ಲೇ ಸಿಲುಕಿಕೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.ಇದಲ್ಲದೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ಗಂಭೀರವಾಗಿದೆ.ಪರಿಸ್ಥಿತಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.
ಮೈಕ್ರೋಕ್ರಿಸ್ಟಲಿನ್ ಸೆಲ್ಯುಲೋಸ್ ಮತ್ತು ಫಾರ್ಮಾ ಎಕ್ಸಿಪೈಂಟ್‌ಗಳು ಹಾಗೂ ಆಹಾರ ಪದಾರ್ಥಗಳ ತಯಾರಕರಾದ ಸಿಗಾಚಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಉತ್ಪಾದನಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ.
ಇನ್ನು ಈ ದುರ್ಘಟನೆಯಲ್ಲಿ ಒಂದು ಕಟ್ಟಡ ಕುಸಿದಿದ್ದು, ಪಕ್ಕದ ರಚನೆಯು ಭಾಗಶಃ ಹಾನಿಗೊಳಗಾಗಿದೆ. ಇನ್ನು ಕುಸಿದು ಬಿದ್ದಿರುವ ಕಟ್ಟಡದ ಅವಶೇಷದಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಸ್ಥಳಕ್ಕೆ ಸಂಗರೆಡ್ಡಿ ಜಿಲ್ಲಾಧಿಕಾರಿ ಪಿ. ಪ್ರವಿಣ್ಯ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದ್ದಾರೆ.
ಭಾರೀ ಸ್ಫೋಟದಿಂದಾಗಿ ಸುತ್ತಮುತ್ತಲಿನ ಸ್ಥಳದಲ್ಲಿ ದಟ್ಟ ಹೊಗೆ ಹಬ್ಬಿ ಜನ ಭಯಭೀತರಾದರು, ಇದರಿಂದಾಗಿ ಜನರಿಗೆ ಉಸಿರಾಟದ ತೊಂದರೆ ಉಂಟಾಯಿತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲಾಗಿದೆ.
Previous Articleರೈತರಿಗೆ ಸಿಹಿ ಸುದ್ದಿ ಕೊಟ್ಟ ಕೆ.ಜೆ.ಜಾರ್ಜ್.
Next Article CM ಮತ್ತುDCM ಬಂಡೆಯಂತೆ ಇದ್ದಾರಂತೆ