ಬೆಂಗಳೂರು, ಫೆ.8: ಪ್ರಜಾಪ್ರಭುತ್ವದ ಹೆಗ್ಗುರುತಾದ ಸಂಸತ್ ಭವನಕ್ಕೆ ಮೂಲ ಪ್ರೇರಣೆಯಾಗಿರುವ 12ನೇ ಶತಮಾನದ ಶಿವಶರಣರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ (Anubhava Mantapa) ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಸಮಾನತೆಯನ್ನು ಸಾರಿದ ಬಸವತತ್ವ ಪ್ರಚಾರದ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ ಎಂದರು.
ಆಧುನಿಕ ಅನುಭವ ಮಂಟಪ ಕಾಮಗಾರಿಯ ಮಾರ್ಚ್ ವರೆಗಿನ ಬಿಲ್ ಗಳನ್ನು ಪಾವತಿ ಮಾಡಲು, ಕಾಮಗಾರಿಗೆ ತ್ವರಿತ ಚಾಲನೆ ನೀಡಲು 50 ಕೋಟಿ ರೂ. ಬಿಡುಗಡೆ ಮಾಡುವಂತೆ ತಾವು ಮಾಡಿದ್ದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತತ್ ಕ್ಷಣವೇ ಹಣ ಬಿಡುಗಡೆ ಮಾಡಿದ್ದಾರೆ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಬೇಕು ಎಂದು 2017ರಲ್ಲಿ ಪೌರಾಡಳಿತ ಸಚಿವರಾಗಿದ್ದಾಗ ತಾವು ಮಾಡಿದ್ದ ಮನವಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಅನುಮೋದನೆ ನೀಡಿ ಬಜೆಟ್ ನಲ್ಲಿ ಪ್ರಕಟಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಆಧುನಿಕ ಅನುಭವ ಮಂಟಪ ನಿರ್ಮಾಣ ಬೀದರ್ ಉಸ್ತುವಾರಿ ಸಚಿವರಾಗಿ ತಮ್ಮ ಕನಸಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಭವ್ಯ, ದಿವ್ಯ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡಿ ಬಸವಕಲ್ಯಾಣವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಮಾಡುವ ಆಶಯ ಹೊಂದಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.