ಬೆಂಗಳೂರು,ಜ.2- ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯಲಿದ್ದು, ವಿರೋಧ ಪಕ್ಷಗಳಿಂದ 10ರಿಂದ 15 ಮಂದಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಎಂದು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುನ್ನ ಅಥವಾ ನಂತರ 10-15 ಮಂದಿ ಕಾಂಗ್ರೆಸ್‍ಗೆ ಬರಲಿದ್ದಾರೆ.ಇವರೆಲ್ಲಾ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಆಪರೇಷನ್ ಕಮಲಕ್ಕೆ ಒಳಗಾಗುವ ಶಾಸಕರು ಕಾಂಗ್ರೆಸ್‍ನಲ್ಲಿ ಯಾರೂ ಇಲ್ಲ.136 ಶಾಸಕರನ್ನು ಹೊಂದಿರುವ ಪ್ರಬಲ ಬಹುಮತ ಇರುವ ಸರ್ಕಾರ ಅಸ್ಥಿರವಾಗಲಿದೆ ಎಂದು ವಿರೋಧ ಪಕ್ಷದವರು ಹೇಳಿದರೆ ನಂಬುತ್ತೀರಾ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಗೆ ಮಾಡಿಕೊಂಡಿರುವ ಜೆಡಿಎಸ್ ಬಿಜೆಪಿ ಮೈತ್ರಿ ಬಹಳಷ್ಟು ಮಂದಿಗೆ ಇಷ್ಟವಿಲ್ಲ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಹಲವರು ಬೇಸರಗೊಂಡಿದ್ದಾರೆ ಇವರೆಲ್ಲರೂ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಭರವಸೆ ನೀಡಿ ಜನರು ಬಹುಮತ ನೀಡಿದ್ದಾರೆ. ಬಿಜೆಪಿ ಜೆಡಿಎಸ್‍ನ್ನು ಜನರು ತಿರಸ್ಕರಿಸಿದ್ದಾರೆ. ಲೋಕಸಭೆ ಚುನಾವಣೆಗೆ ಅವರ ಆಡಳಿತ, ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಹೋಗಲು ಸಾಧ್ಯವಾಗದೆ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಅಯೋಧ್ಯೆಯ ಶ್ರೀರಾಮ ಮಂದಿರದ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಶ್ರೀರಾಮ, ರಾಮಮಂದಿರ ಎಲ್ಲರಿಗೂ ಸೇರಬೇಕು. ನಾವು ದೇವರು, ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೇವೆ. ಅಭಿವೃದ್ಧಿ ವಿಚಾರಗಳನ್ನು ಚರ್ಚೆ ಮಾಡಲು ಬಯಸುತ್ತೇವೆ ಎಂದರು. ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ಸೂಚಿಸಿದೆಯೇ ಹೊರತು ಯಾವುದೇ ಕೇಸನ್ನು ಹಾಕಿ ಜನರಿಗೆ ತೊಂದರೆ ಕೊಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.