ಬೆಂಗಳೂರು, ಜ.2: ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ.ಇದನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ಮೊದಲಿಗೆ ದೊಡ್ಡ ಪ್ರಮಾಣದ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದ್ದಾರೆ.
ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೊದಲಿಗೆ ದೊಡ್ಡ ಪ್ರಮಾಣದ ಒತ್ತವರಿಯ ಪಟ್ಟಿ ಮಾಡಿಕೊಂಡು ಅದನ್ನು ತೆರವುಗೊಳಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯಿದೆ ಜಾರಿಗೊಳಿಸಿವೆ. ಆದರೂ ಸುಮಾರು 2 ಲಕ್ಷ ಎಕರೆ ಅರಣ್ಯಭೂಮಿ ಒತ್ತುವರಿ ಆಗಿದೆ ಎಂಬ ವರದಿಗಳಿದ್ದು ಇದು ಆಘಾತಕಾರಿ ವಿಷಯವಾಗಿದೆ ಎಂದರು.
ಅರಣ್ಯ ಭೂಮಿಯನ್ನು ಯಾರೇ ಒತ್ತುವರಿ ಮಾಡಿದರೂ ಅದು ಅಪರಾಧ.ಆದರೆ,1980ಕ್ಕೆ ಮುನ್ನ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿ ಮನೆ ಕಟ್ಟಿರುವ ಮತ್ತು ಉಳಿಮೆ ಮಾಡುತ್ತಿರುವ ಬಡ ರೈತರಿಗೆ ಕಿರುಕುಳ ನೀಡದೆ, ದೊಡ್ಡ ಒತ್ತುವರಿಗಳನ್ನು ಮೊದಲು ತೆರವು ಮಾಡಿಸಲು ಕ್ರಮ ವಹಿಸುವಂತೆಯೂ ಆದೇಶಿಸಿರುವುದಾಗಿ ಹೇಳಿದರು.
ಅರಣ್ಯ ಒತ್ತುವರಿ ಕುರಿತಂತೆ ವಲಯವಾರು, ವಿಭಾಗವಾರು, ವೃತ್ತವಾರು ಮಾಹಿತಿ ಕೈಸೇರಿದ ಬಳಿಕ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಅರಣ್ಯದಲ್ಲಿ ವನ್ಯ ಮೃಗಗಳ ಸಂಖ್ಯೆ ಹೆಚ್ಚಳವಾಗುತ್ತಿದೆ, ಆದರೆ ಅದಕ್ಕೆ ಅನುಗುಣವಾಗಿ ವನ ಪ್ರದೇಶ ಹೆಚ್ಚಾಗುತ್ತಿಲ್ಲ. ಹೀಗಾಗಿ ಮಾನವ ಮತ್ತು ವನ್ಯ ಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಒತ್ತುವರಿ ತೆರವು ಅತ್ಯಗತ್ಯ ಕ್ರಮವಾಗಿದೆ ಎಂದು ಪ್ರತಿಪಾದಿಸಿದರು.
ತಾವು ಸಚಿವರಾದ ಬಳಿಕ 2 ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಬೆಂಗಳೂರು ಸೇರಿದಂತೆ ರಾಜ್ಯದ ಪಟ್ಟಣ, ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡುವುದು ಅಗತ್ಯವಿದೆ ಎಂದು ಹೇಳಿದರು.
ಈಗಾಗಲೇ ಬೆಂಗಳೂರು ಹೊರವಲಯದ ಕೊತ್ತನೂರಿನಲ್ಲಿ 400ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ರಕ್ಷಿಸಲಾಗಿದ್ದು, ಇದನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿದ್ದ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿಸಿದರು.
ಕಾಡಿನಂಚಿನಲ್ಲಿರುವ ಹಲವು ದಶಕಗಳ ಬೆಲೆಬಾಳುವ ವೃಕ್ಷಗಳನ್ನು ಕಡಿದು ಪಟ್ಟಾಭೂಮಿ ವಿಸ್ತರಣೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ ಈ ಬಗ್ಗೆ ಅರಣ್ಯದಂಚಿನ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಗೂ ಮುನ್ನ ಅರಣ್ಯ ಭೂಮಿ ಒತ್ತುವರಿ ಮಾಡಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕಿದೆ. ಸುಮಾರು 13,155 ಪ್ರಕರಣಗಳಿಗೆ ಸಂಬಂಧಿಸಿದಂತೆ 31,864 ಎಕರೆ ಭೂಮಿ ಇದ್ದು, ಈ ಪೈಕಿ ಸುಮಾರು 7 ಸಾವಿರ ಪ್ರಕರಣಗಳಲ್ಲಿ ಪಟ್ಟಾ ಕೊಡಲು ನಿರ್ಧರಿಸಲಾಗಿದೆ. ಈ ಸಂಬಂಧ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
3 ಪ್ರತಿಕ್ರಿಯೆಗಳು
центр ремонта стиральных машин centr-remonta-stiralnyh-mashin.ru .
i-tec.ru http://www.multimedijnyj-integrator.ru .
гадание индийский пасьянс гадание индийский пасьянс .