ಬೆಂಗಳೂರು, ಸೆ.12- ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.02 ಕೆಜಿ ಹೈಗ್ರೇಡ್ ಕೊಕೇನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಕೀನ್ಯಾ ಮೂಲದ ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಬಂಧಿಸಿದೆ.
ಕೀನ್ಯಾ ಮೂಲದ ಅಜೆಂಗ್ ಓ ಕ್ಯಾರೋಲಿನ್ ಅಗೋಲಾ ಬಂಧಿತ ಮಹಿಳೆಯಾಗಿದ್ದು, ಆಕೆ ತನ್ನ ಖಾಸಗಿ ಭಾಗಗಳು ಮತ್ತು ಒಳ ಉಡುಪುಗಳಲ್ಲಿ ಕ್ಯಾಪ್ಸುಲ್‌ಗಳ ರೂಪದಲ್ಲಿದ್ದ ನಿಷಿದ್ಧ ವಸ್ತುವನ್ನು ಬಚ್ಚಿಟ್ಟಿದ್ದು ಆಕೆಯಿಂದ ಸುಮಾರು 12ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಬಂಧಿತ ಮಹಿಳೆಯು ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದಲ್ಲಿ (ಇಟಿ 690) ಪ್ರಯಾಣ ಬೆಳೆಸಿದ್ದರು. ಅದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿನ್ನೆ ಬೆಳಿಗ್ಗೆ 11.09ಕ್ಕೆ ತಲುಪಿತ್ತು.
ಅನುಮಾಸ್ಪದವಾಗಿ ಬಂದ ಅಜೆಂಗ್ ಓ ಕ್ಯಾರೋಲಿನ್ ಅಗೋಲಾರನ್ನು ಸಿಐಎಸ್ಎಫ್ ಪೊಲೀಸ್ ಲಕ್ಷ್ಮಿ ಮೀನಾ ಪರೀಕ್ಷಿಸುವಾಗ ಹೆಚ್ಚಿನ ಶಂಕೆ ವ್ಯಕ್ತವಾಗಿ ಆಕೆಯನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಆಕೆಯ ಬಟ್ಟೆಯನ್ನು ತೆಗೆಸಿದಾಗ ಒಳ ಉಡುಪುಗಳಲ್ಲಿ ಅನೇಕ ಕ್ಯಾಪ್ಸುಲ್‌ಗಳು ಕಂಡುಬಂದಿವೆ.
ಅವುಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಆಕೆ ಉತ್ತಮ ಗುಣಮಟ್ಟದ ಕೊಕೇನ್ ಸಾಗಿಸುತ್ತಿದ್ದಳು ಎನ್ನುವುದು ಪತ್ತೆಯಾಗಿದೆ.
ಮೊದಲಿಗೆ ಅಗೋಲಾಳನ್ನು ಆಸ್ಟರ್ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಗಿದ್ದು, ಸಂಪೂರ್ಣ ತಪಾಸಣೆಯ ನಂತರ, ಆಕೆಯ ಖಾಸಗಿ ಭಾಗಗಳಲ್ಲಿ ಹೆಚ್ಚಿನ ಕ್ಯಾಪ್ಸುಲ್‌ಗಳನ್ನು ಮರೆಮಾಡಿರುವುದನ್ನು ವೈದ್ಯಕೀಯ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ‘ವಿಚಾರಣೆ ವೇಳೆ, ಆಕೆ ಕೆಲವು ಕ್ಯಾಪ್ಸುಲ್‌ಗಳನ್ನು ನುಂಗಿರುವುದಾಗಿ ಒಪ್ಪಿಕೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ, ಆಕೆಯ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲಾಯಿತು’ ಎಂದು ಮತ್ತೊಂದು ಮೂಲವು ತಿಳಿಸಿದೆ. ಪತ್ತೆಯಾದ ಕ್ಯಾಪ್ಸುಲ್‌ಗಳ ಸಂಖ್ಯೆ ಎಷ್ಟೆಂಬ ಮಾಹಿತಿ ತಿಳಿದುಬಂದಿಲ್ಲ.
ಕೊಕೇನ್ ಅತ್ಯಂತ ಉತ್ತಮ ಗುಣಮಟ್ಟದ್ದಾಗಿದೆ ಮತ್ತು ಸುಮಾರು 12 ಕೋಟಿ ರೂ. ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ’ ಎಂದು ಮಾದಕವಸ್ತುಗಳ ಪರಿಚಯವಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ‘ವಶಪಡಿಸಿಕೊಂಡ ವಸ್ತುವನ್ನು ಎನ್‌ಸಿಬಿಗೆ ಹಸ್ತಾಂತರಿಸಲಾಗಿದೆ’ ಎಂದು ಅವರು ಹೇಳಿದರು.
ಆಕೆ ಸ್ವಂತವಾಗಿ ಕೊಕೇನ್ ಸಾಗಿಸುವ ಕಾರ್ಯ ಮಾಡುತ್ತಿದ್ದಳೋ ಅಥವಾ ಯಾವುದಾದರೂ ದಂಧೆಯ ಭಾಗವಾಗಿದ್ದಾರೋ ಎಂಬುದನ್ನು ಪತ್ತೆಹಚ್ಚಲು ವಿಚಾರಣೆ ನಡೆಯುತ್ತಿದೆ.
ಆಕೆಯ ವಿರುದ್ಧ ‘ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.