ಬೆಂಗಳೂರು, ಅ.4 -ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ-BMTC)ಯ ವಾಣಿಜ್ಯ ( ಕಮರ್ಷಿಯಲ್) ವಿಭಾಗದಲ್ಲಿ ಕೋಟಿ ಕೋಟಿ ಹಣ ಅಕ್ರಮ ನಡೆದಿರುವ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಸಹಾಯಕ ಭಧ್ರತೆ ಹಾಗೂ ಜಾಗೃತದಳದ ಅಧಿಕಾರಿ ಸಿ.ಕೆ ರಮ್ಯ ನೀಡಿದ ದೂರಿನ ಅನ್ವಯ ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಯಲ್ಲಿ ಏಳು ಜನ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಕ್ರಮದ ಮೊದಲ ಆರೋಪಿ ಶ್ರೀರಾಮ್ ಮುಲ್ಕಾವನ್ ರನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಿಎಂಟಿಸಿಯ ಹಿಂದಿನ ಎಂಡಿ ಶಿಖಾ ಹಾಗೂ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ ಅರುಣ್. ಕೆ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿ ಕೋಟಿ ಕೋಟಿ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಏಳು ಜನರನ್ನು ಕಮರ್ಷಿಯಲ್ ವಿಭಾಗದಿಂದ ಬೇರೆಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ.
ಮೊದಲ ಆರೋಪಿ ಶ್ರೀ ರಾಮ್ ಮುಲ್ಕಾವನ್ ( ಅಂದಿನ ) ಮುಖ್ಯ ಸಂಚಾರ ವ್ಯವಸ್ಥಾಪಕರು) ಎರಡನೇ ಆರೋಪಿ ಶ್ಯಾಮಲಾ. ಎಸ್. ಮದ್ದೋಡಿ, (ವಿಭಾಗೀಯ ಸಂಚಾರ ಅಧಿಕಾರಿ) ಮೂರನೇ ಆರೋಪಿ ಮಮತಾ. ಬಿ.ಕೆ,( ಸಹಾಯಕ ಸಂಚಾರ ವ್ಯವಸ್ಥಾಪಕರು)4 ನೇ ಆರೋಪಿ ಅನಿತಾ.ಟಿ , (ಸಹಾಯಕ ಸಂಚಾರ ಅಧೀಕ್ಷಕಿ)
ಐದನೇ ಆರೋಪಿ ಗುಣಶೀಲ, (ಸಹಾಯಕ ಸಂಚಾರ ನಿರೀಕ್ಷಕಿ) ಆರನೇ ಆರೋಪಿ ವೆಂಕಟೇಶ್. ಆರ್, (ಕಿರಿಯ ಸಹಾಯಕ)7 ನೇ ಆರೋಪಿ ಪ್ರಕಾಶ್ ಕೊಪ್ಪಳ, (ಕಿರಿಯ ಸಹಾಯಕ)ಯಾಗಿದ್ದಾರೆ.
ಹಿಂದೆ ಬಿಎಂಟಿಸಿಯಲ್ಲಿ ಎಂಡಿಗಳಾಗಿದ್ದ ಶಿಖಾ, ರೇಜು ಮತ್ತು ಭದ್ರತಾ ಮತ್ತು ಜಾಗೃತದಳದ ನಿರ್ದೇಶಕ ಅರುಣ್. ಕೆ ಸಹಿಯನ್ನು ಪೋರ್ಜರಿ ಮಾಡಿದ್ದಾರೆ. ಒಂದು ಕಡತದಲ್ಲಿ 10 ಕೋಟಿ 50 ಲಕ್ಷ ಹಾಗೂ ಮತ್ತೊಂದು ಕಡತದಲ್ಲಿ 6 ಕೋಟಿ 91 ಲಕ್ಷ ಹಾಗೂ 21 ಲಕ್ಷದ 64 ಸಾವಿರ, 1 ಲಕ್ಷದ 5 ಸಾವಿರ ಹೀಗೆ ಒಟ್ಟು ಸುಮಾರು 17 ಕೋಟಿ 64 ಲಕ್ಷ ರುಪಾಯಿ ಸಂಸ್ಥೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಕ್ರಮದ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ತನಿಖೆಗೆ ಆದೇಶಿಸಿದ್ದರು. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಅಲ್ಲಲ್ಲಿ ಅಕ್ರಮ ನಡೆಯುತ್ತಲೆ ಇತ್ತು. ಅಧಿಕಾರಿಗಳು ಗೂಗಲ್ಪೇ, ಫೋನ್ಪೇ ಮೂಲಕ 4-5 ಲಕ್ಷ ರೂ. ಲಂಚ ತೆಗೆದುಕೊಂಡಿರುವುದು ಸಾಬೀತಾಗಿದೆ.
ಈ ಪ್ರಕರಣ ಸಂಬಂಧ 7 ಅಧಿಕಾರಿಗಳು, ಸಿಬ್ಬಂದಿ ಅಮಾನತು ಮಾಡಿದ್ದಾರೆ. ಅಮಾನತು ಮಾಡಿದರೆ ಸಾಕಾಗಲ್ಲ, ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಚಾಲಕರು, ನಿರ್ವಾಹಕರಿಗೆ ಅಧಿಕಾರಿಗಳು ಕಿರುಕುಳ ನೀಡುವುದು ಸರಿಯಲ್ಲ. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.