ಶ್ರೀನಗರ,ಜೂ.14-ಅಮರನಾಥ ಯಾತ್ರೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಪಾಕಿಸ್ತಾನದ ಭಯೋತ್ಪಾದಕ ಸೇರಿದಂತೆ ಇಬ್ಬರು ಎಲ್‍ಇಟಿ ಭಯೋತ್ಪಾದಕರನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ.
ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಒಬ್ಬ ಪಾಕಿಸ್ತಾನದ ಭಯೋತ್ಪಾದಕ ಸೇರಿದಂತೆ ಇಬ್ಬರು ಎಲ್‍ಇಟಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.
ಮೃತ ಭಯೋತ್ಪಾದಕರು ಕಳೆದ ಜೂನ್ 6 ರಂದು ಸೊಪೂರ್ ಅರಣ್ಯದಲ್ಲಿ ಸಿಕ್ಕ ಗುಂಪಿನ ಭಾಗವಾಗಿದ್ದರು. ಗುಂಡಿನ ದಾಳಿಯಲ್ಲಿನ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಹಂಜಲ್ಲಾ ಮೃತಪಟ್ಟಿದ್ದಾನೆ. ಮುಂಬರುವ ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಉಗ್ರರ ಗುಂಪೊಂದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಮಾತನಾಡಿ, ಶ್ರೀನಗರ ಪೊಲೀಸರು ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಒಬ್ಬ ಪಾಕಿಸ್ತಾನದ ಭಯೋತ್ಪಾದಕ ಸೇರಿದಂತೆ ಇಬ್ಬರು ಎಲ್‍ಇಟಿ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಇದೇ ಭಯೋತ್ಪಾದಕರ ಗುಂಪು, ಸೊಪೂರ್ ಎನ್‍ಕೌಂಟರ್‌ನಿಂದ ತಪ್ಪಿಸಿಕೊಂಡಿತ್ತು. ನಾವು ಅವರ ಚಲನವಲನದ ಮೇಲೆ ನಿಗಾ ಇರಿಸಿ ಹತ್ಯೆ ಮಾಡಲಾಗಿದೆ ಎಂದು ವಿವರಿಸಿದರು.