ಮಂಗಳೂರು,ನ.25-ನಗರದ ಕುಕ್ಕರ್ ಬಾಂಬ್ ಸ್ಫೋಟದ ಬಾಂಬರ್ ಶಾರೀಕ್ ಐಸಿಸ್ ಉಗ್ರರಂತೆ ಸೆಲ್ಫಿ ವಿಡಿಯೋ ಮಾಡಿ ಪ್ರತಿಕಾರದ ಪ್ರತಿಜ್ಞೆ ತೆಗೆದುಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಾರೀಕ್ ಐಸಿಸ್ ಉಗ್ರರಂತೆ ಸೆಲ್ಫಿ ವಿಡಿಯೋ ಮಾಡಿ ಪ್ರತಿಕಾರದ ಪ್ರತಿಜ್ಞೆ ತೆಗೆದುಕೊಂಡು ಬಾಂಬ್ ತಯಾರಿ ಮಾಡಿರುವ ವಿಡಿಯೋ ಆತನ ಮೊಬೈಲ್ ಪರಿಶೀಲನೆ ವೇಳೆ ಲಭ್ಯವಾಗಿದೆ.
ಮೂಲಭೂತವಾದಿ ಭಾಷಣಕಾರ ಝಾಕೀರ್ ನಾಯ್ಕ್ ಭಾಷಣದಿಂದ ಪ್ರಭಾವಿತನಾಗಿದ್ದ ಈತ ಝಾಕೀರ್ ನಾಯ್ಕ್‌ನನ್ನು ʼದಿ ರಿಯಲ್ ಇನ್ಸ್ಪಿರೇಶನ್ʼ ಎಂದು ಸಂಬೋಧಿಸಿದ್ದ.
ಯೂಟ್ಯೂಬ್‌ನಿಂದ ಝಾಕೀರ್ ನಾಯ್ಕ್ ವೀಡಿಯೋ ಡೌನ್‌ಲೋಡ್ ಮಾಡಿದ್ದು ಶಾರೀಕ್ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಭಾಷಣಗಳು ಸಿಕ್ಕಿವೆ. ಟೋರ್ ಬ್ರೌಸರ್ ಮೂಲಕ ಡಾರ್ಕ್ ವೆಬ್ ಬಳಸುತಿದ್ದ ವಿಚಾರವೂ ಲಭ್ಯವಾಗಿದೆ.
ದ್ವೇಷ ಭಾಷಣ, ಭಯೋತ್ಪಾದನೆಗೆ ಪ್ರೇರಣೆ, ಹಣಕಾಸು ನೆರವು ಆರೋಪ ಹಿನ್ನೆಲೆಯಲ್ಲಿ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ಪೀಸ್ ಟಿವಿಗೆ ಭಾರತ ನಿರ್ಬಂಧ ಹೇರಿದೆ. ಝಾಕೀರ್ ಭಾಷಣದಿಂದ ಪ್ರಚೋದಿತನಾಗಿದ್ದ ಐಸಿಸ್ ಉಗ್ರನೋರ್ವ 2016ರಲ್ಲಿ ಢಾಕಾದ ಮೇಲೆ ದಾಳಿ ಮಾಡಿದ್ದನು. ಈ ಘಟನೆಯಿಂದಾಗಿ ತಕ್ಷಣವೇ ಬಳಿಕ ಝಾಕೀರ್ ಭಾರತ ಬಿಟ್ಟು ಮಲೇಷ್ಯಾಕ್ಕೆ ಹೋಗಿದ್ದ.
ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡುವುದಕ್ಕೆ ಪ್ರೋತ್ಸಾಹ, ಭಯೋತ್ಪಾದಕರನ್ನು ಹೊಗಳುವುದು, ಆತ್ಮಹತ್ಯಾ ಬಾಂಬ್ ದಾಳಿ ಸಮರ್ಥನೆ, ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್, ಇತರ ಧರ್ಮಗಳಿಗೆ ಅವಮಾನ ಈ ಎಲ್ಲಾ ಆರೋಪಗಳು ಝಾಕೀರ್ ನಾಯ್ಕ್ ಮೇಲಿದೆ.