ಬೆಂಗಳೂರು, ಅ. 26: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಗಳು (Engineers) ವರ್ಗಾಯಿಸಿದ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೆ ಕರ್ತವ್ಯಲೋಪವೆಸಗಿದ ಆರೋಪದಡಿ 27 ಮಂದಿ ಇಂಜಿನಿಯರ್ ಗಳಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೆಲಸದ ಅಗತ್ಯ ಆಧರಿಸಿ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು. ಅದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹಲವು ಇಂಜಿನಿಯರ್ ಗಳನ್ನು (Engineers) ವರ್ಗಾವಣೆ ಮಾಡಲಾಗಿತ್ತು.
ಇದರಲ್ಲಿ 27 ಮಂದಿ ಸಹಾಯಕ ಕಾರ್ಯಪಾಲಕ ಎಂಜನಿಯರ್‌ಗಳು, ಸಹಾಯಕ ಎಂಜನಿಯರ್‌ಗಳು ಹಾಗೂ ಜೂನಿಯರ್ ಎಂಜಿನಿಯರ್‌ಗಳು ತಮಗೆ ವರ್ಗಾವಣೆ ಮಾಡಿದ ಸ್ಥಳಕ್ಕೆ ತೆರಳಿ ಕಾರ್ಯ ಪ್ರವೃತ್ತರಾಗಿಲ್ಲ.ಈ ಹಿನ್ನೆಲೆಯಲ್ಲಿ ಇದನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಅವರನ್ನು ಸೇವೆಯಿಂದ ಅಮಾನತ್ತು ಪಡಿಸಿ ಆದೇಶಗಳನ್ನು ಹೊರಡಿಸಿದೆ.
ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(1) (ಡಿ) ಅಡಿ ಪ್ರದತ್ತವಾದ ಅಧಿಕಾರದನ್ವಯ ಈ ಎಲ್ಲ ಅಧಿಕಾರಿಗಳನ್ನು ಇಲಾಖಾ ತನಿಖೆ ಕಾದಿರಿಸಿ ಮುಂದಿನ ಆದೇಶದವರೆಗೆ ಅಮಾನತ್ತುಪಡಿಸಿ ಆದೇಶ ಹೊರಡಿಸಲಾಗಿದೆ. ಅಮಾನತ್ತುಗೊಂಡಿರುವ ಅಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ ಅಮಾನತ್ತುಗೊಂಡ ಅಧಿಕಾರಿಗಳಲ್ಲಿ 5 ಮಂದಿ ಸಹಾಯಕ ಕಾರ್ಯಪಾಲಕ ಎಂಜನಿಯರ್‌ಗಳು (ಎಇಇ), 7 ಮಂದಿ ಸಹಾಯಕ ಎಂಜನಿಯರ್‌ಗಳು (ಎಇ) ಹಾಗೂ 15 ಮಂದಿ ಜೂನಿಯರ್ ಎಂಜನಿಯರ್‌ಗಳು (ಜೆಇ) ಸೇರಿದ್ದಾರೆ.