ಅಯೋಧ್ಯೆ (Ayodhya): ರಾಮನ ಜನ್ಮಸ್ಥಳ ಅಯೋಧ್ಯೆ ಇದೀಗ ದೇಶದ ಪವಿತ್ರ ಯಾತ್ರಾಸ್ಥಳವಾಗಿ ಪರಿಣಮಿಸಿದೆ.ಇಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿ,ದೇವಾಲಯ ಲೋಕಾರ್ಪಣೆ ಮಾಡಿದ ನಂತರ ಇದನ್ನು ಸರ್ವಧರ್ಮೀಯರ ಧಾರ್ಮಿಕ ಕೇಂದ್ರವಾಗಿಸಲು ಸಂಘ ಪರಿವಾರ ಪ್ರಯತ್ನ ನಡೆಸಿದೆ.
ಇದರ ಭಾಗವಾಗಿ ಸಂಘ ಪರಿವಾರದ ಮುಸ್ಲಿಂ ಪ್ರತಿನಿಧಿಗಳ ಅಂಗ ಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ವಿಶೇಷ ಪ್ರಯತ್ನ ನಡೆಸಿದೆ.ಅಯೋಧ್ಯೆಯ ರಾಮಮಂದಿರ ಮುಸ್ಲಿಂರಿಗೂ ಪ್ರಿಯ ಎಂಬ ಸಂದೇಶ ರವಾನಿಸಲು ಮುಂದಾಗಿದೆ.
ಇದರ ಭಾಗವಾಗಿ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಸಂಚಾಲಕ ರಾಜಾ ರಯೀಸ್ ಮತ್ತು ಪ್ರಾಂತೀಯ ಸಂಚಾಲಕ ಶೇರ್ ಅಲಿ ಖಾನ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 350 ಮಂದಿ ಲಕ್ನೋದಿಂದ ಅಯೋಧ್ಯೆಗೆ ಸರಿಸುಮಾರು 150 ಕಿ.ಮೀ ಪಾದಯಾತ್ರೆ ಕೈಗೊಂಡರು.
ಆರು ದಿನಗಳ ಕಾಲ ನಡೆದ ಈ ಪಾದಯಾತ್ರೆಯ ಸಮಯದಲ್ಲಿ,ಮುಸ್ಲಿಂ ರಾಷ್ಟ್ರೀಯ ಮಂಚ್ ನಿಂದ ಸೀತಾ ರಸೋಯಿ ಹೆಸರಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು
350 ಮಂದಿ ಪಾದಯಾತ್ರಿಗಳು ಪ್ರತಿ ದಿನ 25 ಕಿ.ಮಿ ನಂತೆ ನಡೆಯುತ್ತಾ ಆರು ದಿನಗಳಲ್ಲಿ ಅಯೋಧ್ಯೆ ತಲುಪಿ ಶ್ರೀ ರಾಮನ ಮುಂದೆ ನಿಂತು ಪ್ರಾರ್ಥನೆ ಮಾಡಿದರು.
ಶ್ರೀರಾಮ ಮಂದಿರದಲ್ಲಿ ಬಾಲರಾಮನ ದರ್ಶನದ ನಂತರ ದೇವಾಲಯದ ಆವರಣದಲ್ಲಿ ಮಾತನಾಡಿದ ಮಂಚ್ ಸಂಚಾಲಕ ರಾಜಾ ರಯೀಸ್ , ರಾಮನು ಎಲ್ಲರಿಗೂ ಆದರ್ಶ ಎಂದು ಪ್ರತಿಪಾದಿಸಿದರು. ಧರ್ಮ, ಜಾತಿ ಮತ್ತು ಧರ್ಮಕ್ಕಿಂತ ದೇಶ ಮತ್ತು ಮಾನವೀಯತೆ ಆದ್ಯತೆಯಾಗಿದೆ. ಯಾವುದೇ ಧರ್ಮವು ಇತರರಿಗೆ ಟೀಕೆ, ಅಪಹಾಸ್ಯ ಅಥವಾ ತಿರಸ್ಕಾರವನ್ನು ಕಲಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.