ಚಿಕ್ಕಮಗಳೂರು.
ಪಶ್ಚಿಮಘಟ್ಟ ಅರಣ್ಯಕ್ಕೆ ಹೊಂದಿಕೊಂಡ ಮಲೆನಾಡಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ.
ಬೆಳೆದು ನಿಂತಿರುವ ಬೆಳೆಯನ್ನೆಲ್ಲಾ ತಿಂದು ಧ್ವಂಸ ಮಾಡುವ ಆನೆಗಳು ಈಗ ಆಹಾರ ಮತ್ತು ನೀರು ಅರಸಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಹಾಕುತ್ತಿವೆ.
ಮೂಡಿ ಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪದ ದಾರದಹಳ್ಳಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಒಂಟಿ ಸಲಗ ಬಂದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಈ ಗ್ರಾಮದ ನಿವಾಸಿ ಯಶವಂತ್ ಎಂಬುವರ ಮನೆ ಬಾಗಿಲಿಗೆ ಬಂದ ಒಂಟಿ ಸಲಗ ಕಂಡು ಕ್ಷಣ ಕಾಲ ಮನೆಯಲ್ಲಿದ್ದವರು ಆತಂಕಕ್ಕೆ ಒಳಗಾಗಿದ್ದಾರೆ. ಅಂಗಳದಲ್ಲಿ ಕಾಣಿಸಿದ ಆನೆ ಕ್ರಮೇಣ ಮನೆ ಬಾಗಿಲವರೆಗೂ ಬಂದು ಹಿಂತಿರುಗಿದೆ.
ಆನೆ ಬಂದ ದೃಶ್ಯವನ್ನು ಹೆದರುತ್ತಲೇ ಮನೆ ಮಾಲೀಕ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.
ಆನೆಗಳ ಆವಾಸ ಸ್ಥಾನದಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಳ್ಳುತ್ತಿರುವುದರ ಜೊತೆಗೆ ಆನೆಗೆ ಅಗತ್ಯ ಇರುವ ಆಹಾರ ಸರಪಳಿಯಲ್ಲಿಯೂ ವ್ಯತ್ಯಾಸವಾಗಿರುವುದು ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ವಿಶ್ಲೇಷಿಸಿದ್ದಾರೆ.