ಉಡುಪಿ: ಕಳೆದ ಎರಡು ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಮುಳುಗಡೆ ಸ್ಥಿತಿಗೆ ತಲುಪಿದ ಕೋಟ ಸಮೀಪದ ಬನ್ನಾಡಿ, ಉಪ್ಲಾಡಿ, ಬೆಟ್ಲಕ್ಕಿಯಲ್ಲಿ ನೆರೆ ಇಳಿಮುಖವಾಗಿದೆ. ನಿನ್ನೆ ರಾತ್ರಿಯಿಂದ ಮಳೆ ಇಳಿಮುಖವಾದ ಹಿನ್ನಲೆಯಲ್ಲಿ ನೆರೆ ನೀರು ಹರಿದು ಕಡಲು ಸೇರಿ ನೆರೆ ಇಳಿದೆ. ಆದರೂ ಮಧ್ಯಾಹ್ನ ನಂತರ ಹವಾಮಾನ ಇಲಾಖೆ ಲೆಕ್ಕಾಚಾರದಂತೆ ಮಳೆ ಬಂದರೆ ಮತ್ತೆ ಈ ಭಾಗದಲ್ಲಿ ನೆರೆ ಹಾವಳಿ ಖಂಡಿತ.
ಇಂದು ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ 240 ಮಿಮಿ ಮಳೆಯ ಸಂಭಾವ್ಯತೆಯನ್ನು ತಿಳಿಸಿತ್ತು. ಆದರೆ ಬ್ರಹ್ಮಾವರ ತಾಲೂಕಿನಲ್ಲಿ ಮಳೆರಾಯ ಮುಂಜಾನೆಯಿಂದಲೇ ಕೊಂಚ ಬ್ರೇಕ್ ನೀಡದ ಪರಿಣಾಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಸಹಕಾರಿಯಾಗಿದೆ. ಇದಲ್ಲದೇ ಭಾರಿ ಗಾಳಿ ಮಳೆ ನಿರೀಕ್ಷೆ ಯಿರುವ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸದ್ಯ ಕೋಟ ಭಾಗದಲ್ಲಿ ನೆರೆ ಏನೋ ಇಳಿಮುಖವಾಗುತ್ತಿದೆ. ಆದರೆ ನಾಟಿ ಮಾಡಿದ ಭತ್ತದ ಪೈರು, ನಾಟಿ ಮಾಡಲು ಸಿದ್ಧಪಡಿಸಿದ ಭತ್ತದ ನೇಜಿ ಗಿಡಗಳು ನೀರಿನಲ್ಲಿ ಕೊಳೆಯಲಾರಂಭಿಸಿದೆ. ಇನ್ನೂ ಎರಡು ಮೂರು ದಿನಗಳ ಕಾಲ ಇದೇ ರೀತಿ ನೀರು ನಿಂತಲ್ಲಿ ಈ ಭಾಗದ ಭತ್ತ ಬೆಳೆ ದೇವರೆ ಗತಿ ಎನ್ನುವಂತಾಗಿದೆ. ಇಲ್ಲಿ ರೈತರು ಭತ್ತದ ಬೆಳೆಯ ಇಳುವರಿಯ ಆಸೆ ಕೈ ಬಿಟ್ಟಿದ್ದು ಸರಕಾರ ಸೆರೆ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.