ಬೆಂಗಳೂರು,ಜು.9-ಪಿಎಸ್ ಐ ಅಕ್ರಮ ನೇಮಕಾತಿ ಹಗರಣದ ಬೆನ್ನಲ್ಲೇ ಇಲಾಖೆಯ ಕ್ರೈಮ್ ಆಫೀಸರ್ ಹುದ್ದೆಗಳಿಗೆ ಒಂದೇ ಕಾಲೇಜಿನ 103 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕ್ರೈಮ್ ಆಫೀಸರ್ ವಿಭಾಗದಲ್ಲಿ ಖಾಲಿ ಇದ್ದ ಒಟ್ಟು 209 ಹುದ್ದೆಗಳ ಪೈಕಿ 103 ಹುದ್ದೆಗಳಿಗೆ ಒಂದೇ ಕಾಲೇಜಿಗೆ ಸೇರಿದವರೇ ಆಯ್ಕೆಯಾಗಿರುವುದು ಭ್ರಷ್ಟಾಚಾರ ನಡೆದಿರುವ ಸಂಶಯಕ್ಕೆ ಕಾರಣವಾಗಿದೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪೌಲ್ ಪೊಲೀಸ್ ನೇಮಕಾತಿ ಪ್ರಾಧಿಕಾರದ
ಅಧ್ಯಕ್ಷರಾಗಿ ಪ್ರಾಧಿಕಾರದಿಂದ ವರ್ಗಾವಣೆ ಆಗುವ ಮುನ್ನ ನಡೆದಿದ್ದ ನೇಮಕಾತಿಯ ಆಯ್ಕೆಪಟ್ಟಿಯು ಬಿಡುಗಡೆಗೊಂಡ ಬೆನ್ನಲ್ಲೇ ಇದೀಗ ಒಂದೇ ಕಾಲೇಜಿನ 103 ಮಂದಿ ಆಯ್ಕೆಯಾಗಿರುವುದು ಮುನ್ನೆಲೆಗೆ ಬಂದಿದೆ.
ಆಯ್ಕೆಯಾಗಿರುವ 103 ಮಂದಿ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ವಿಜ್ಞಾನ ಕಾಲೇಜಿನ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ವಿಭಾಗದ ಬಿಎಸ್ ಸಿ ಮತ್ತು ಬಿಎ ವಿದ್ಯಾರ್ಥಿಗಳಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.
ಅಲ್ಲದೆ ಆಯ್ಕೆಪಟ್ಟಿ ಹೊರಬಿದ್ದ ಬೆನ್ನಲ್ಲೇ ಈ ಸಂಗತಿ ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ನಲ್ಲಿ ಅಭಿನಂದನೆಗಳು ವ್ಯಕ್ತವಾಗಿವೆ
ಇದೊಂದು ಹೆಮ್ಮೆ ಸಂಗತಿ. ಕೆಎಸ್ ಸಿಡಿ ಮತ್ತು ಕೆಎಸಿಡಿಯ ಒಟ್ಟು 103 ವಿದ್ಯಾರ್ಥಿಗಳು ಸೀನ್ ಆಫ್ ಕ್ರೈಮ್ ಅಫೀಸರ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದು ಕೆಸಿಡಿ ಇತಿಹಾಸಕ್ಕೆ ಸೇರ್ಪಡೆಯಾಗಿದೆ. ನಿವೃತ್ತ ಮತ್ತು ಹಾಲಿ ಬೋಧಕ ವೃಂದವು ಸಾಧಕರನ್ನು ಅಭಿನಂದಿಸಿದೆ,’ ಎಂಬ ಬರಹವು ವಾಟ್ಸಾಪ್ ಗ್ರೂಪ್ ನಲ್ಲಿ ಹರಿದಾಡುತ್ತಿದೆ.
2021ರಲ್ಲಿ ಕ್ರೈಮ್ ಆಫೀಸರ್ ಆಯ್ಕೆ ಪ್ರಕ್ರಿಯೆ ನಡೆದಿತ್ತಾದರೂ 2022ರ ಜುಲೈ 2ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಸಿಐಡಿ ಪೊಲೀಸರು ಅಮೃತ್ ಪೌಲ್ ಅವರನ್ನು ಬಂಧನಕ್ಕೊಳಪಡಿಸಿ ಅಮಾನತುಗೊಳಿಸಿರುವ ಬೆನ್ನಲ್ಲೇ 2022ರ ಜುಲೈ 2ರಂದು ಬಿಡುಗಡೆಗೊಂಡಿತ್ತು.
ಅಮೃತ್ ಪೌಲ್ ಅವರು ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇಡೀ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಆಯ್ಕೆಪಟ್ಟಿಯನ್ನು ಬಿಡುಗಡೆಗೊಳಿಸಿರಲಿಲ್ಲ. ಪಿಎಸ್ ಐ ನೇಮಕಾತಿ ಹಗರಣದಲ್ಲಿ ವಿಚಾರಣೆ ನಡೆಯುತ್ತಿದ್ದರಿಂದಾಗಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆಗೊಳಿಸಿರಲಿಲ್ಲ ಎನ್ನಲಾಗಿದೆ. ನೇಮಕಾತಿ ಪ್ರಾಧಿಕಾರದ ಪ್ರಸ್ತುತ ಅಧ್ಯಕ್ಷರಾದ ಡಿಜಿಪಿ ಕಮಲ್ ಪಂತ್ ಅವರ ಸಹಿಯೊಂದಿಗೆ ತಾತ್ಕಾಲಿಕ ಆಯ್ಕೆಪಟ್ಟಿಯು ಬಿಡುಗಡೆಯಾಗಿತ್ತು.