ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಶಾಮೀಲಾಗಿರುವ ಮತ್ತಷ್ಟು ಪ್ರಭಾವಿಗಳ ಬೆನ್ನು ಹತ್ತಿರುವ ಸಿಐಡಿ ಇದೀಗ ಬಂಧಿತ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಇರಿಸಿದ್ದ ಕೊಠಡಿಯಲ್ಲಿ ಅಕ್ರಮ ನಡೆದಿರುವುದನ್ನು ಪುರಾವೆ ಸಮೇತ ಈಗಾಗಲೇ ಪತ್ತೆ ಮಾಡಿರುವ ಅಧಿಕಾರಿಗಳು, ತೀವ್ರ ನಿಗಾದಲ್ಲಿದ್ದ ಕೊಠಡಿ ಬೀಗ ತೆರೆದವರು ಯಾರು? ಹಾಗು ಬೀಗದ ಕೀ ಕೊಟ್ಟವರು ಯಾರು? ಎಂಬುದನ್ನು ಸಾಕ್ಷ್ಯ ಸಮೇತ ತಿಳಿಯಲು ಮುಂದಾಗಿದ್ದಾರೆ.
ಭದ್ರತಾ ಕೊಠಡಿ ಬೀಗಕ್ಕೆ ಎರಡು ಕೀಗಳಿದ್ದವು. ಒಂದು ಕೀ ಎಡಿಜಿಪಿ ಬಳಿ ಇತ್ತು. ಇನ್ನೊಂದು, ವಿಭಾಗದ ಸೂಪರಿಂಟೆಂಡೆಂಟ್ ಸುನೀತಾ ಅವರ ಬಳಿಯಿತ್ತು. ನ್ಯಾಯಾಲಯದ ಅನುಮತಿ ಪಡೆದು ಸುನೀತಾ ಅವರನ್ನು ಈಗಾಗಲೇ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಬರುವುದು ಬಾಕಿ ಇದೆ. ಇದೇ ಮಾದರಿಯಲ್ಲಿ ಇದೀಗ ಪೌಲ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿದ್ದತೆ ನಡೆಸಿದ್ದಾರೆ.
ಪಿಎಸ್‌ಐ ನೇಮಕಾತಿಗಾಗಿ ನಡೆದ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್ ಅಸಲು ಪ್ರತಿಗಳನ್ನು ಟ್ರಂಕ್‌ಗಳಲ್ಲಿಟ್ಟು ಬೆಂಗಳೂರಿನಲ್ಲಿರುವ ನೇಮಕಾತಿ ವಿಭಾಗದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿತ್ತು. ನಂತರ, ಕೊಠಡಿಗೆ ಬೀಗ ಹಾಕಿ ಸೀಲ್ ಮಾಡಲಾಗಿತ್ತು.
‘ಇದರ ಉಸ್ತುವಾರಿ ಹೊತ್ತಿದ್ದ ಎಡಿಜಿಪಿ ಪೌಲ್ ಅವರೇ ಭದ್ರತಾ ಕೊಠಡಿ ಕೀ ಕೊಟ್ಟು, ಒಎಂಆರ್ ಪ್ರತಿಗಳನ್ನು ತಿದ್ದುಪಡಿ ಮಾಡಿಸಿದ್ದರೆಂದು ಆರೋಪಿ ಶಾಂತಕುಮಾರ್ ಹಾಗು ಇತರೆ ಆರೋಪಿಗಳು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ, ಈ ಆರೋಪವನ್ನು ಎಡಿಜಿಪಿ ತಳ್ಳಿಹಾಕುತ್ತಿದ್ದಾರೆ.ಹೀಗಾಗಿ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ನ್ಯಾಯಾಲಯಕ್ಕೆ ಸದ್ಯದಲ್ಲೇ ಕೋರಿಕೆ ಸಲ್ಲಿಸಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.
Previous Articleಮತ್ತೊಂದು ನೇಮಕಾತಿ ಕರ್ಮಕಾಂಡ..?
Next Article ಶ್ರೀನಿ ಹುಟ್ಟುಹಬ್ಬ: ಬೀರ್ ಬಲ್ 2 ಪೋಸ್ಟರ್ ರಿಲೀಸ್