ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿದ್ದೇನೆ. ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಜನರಿಗೆ ನೆರವಾಗಲು ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರವಾಸದ ಬಗ್ಗೆ ಜಿಲ್ಲಾಧಿಕಾರ ಜೊತೆಗೆ ವಿಡಿಯೋ ಕಾನ್ಪರೇನ್ಸ್ ಮಾಡಿದ್ದೇನೆ. ಬೀದರ್, ಬೆಳಗಾವಿ, ರಾಯಚೂರು ಸೇರಿದಂತೆ ಎಲ್ಲೆಡೆಯಿಂದ ವರದಿ ತರಿಸಿಕೊಂಡಿದ್ದೇನೆ. ಆದೇ ರೀತಿ ಆದೇಶವನ್ನು ಹೊರಡಿಸಿ ಎಲ್ಲೆಲ್ಲಿ ನದಿ ಪಾತ್ರದಲ್ಲಿ ಮಿತಿಗಿಂತ ನದಿ ಹೆಚ್ಚು ಹರಿಯುವ ಸಂಭವವಿದೆ ಜೊತೆಗೆ ವಿಶೇಷವಾಗಿ ಬೀದರ್, ಬೆಳಗಾವಿ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಜಿಲ್ಲಾಧಿಕಾರಿಗಳೊಂದಿಗೆ ಇಲ್ಲಿನ ಜಿಲ್ಲಾಧಿಕಾರಿಗಳು, ಅಧಿಕಾರಿಗಳು, ಡ್ಯಾಮ್ ಸಂಬಂಧಿತ ಅಧಿಕಾರಿಗಳು ಸಂಪರ್ಕದಲ್ಲಿ ಇರಲು ತಿಳಿಸಿದ್ದೇನೆ. ಈ ಹಿಂದೆ ಪ್ರವಾಹ ಪರಿಸ್ಥಿತಿ ನಿಭಾಯಿಸಿದ ಅನುಭವದ ಮೇಲೆ ಪರಿಸ್ಥಿತಿ ನಿಭಾಯಿಸಲು ತಿಳಿಸಲಾಗಿದೆ ಎಂದರು.
ಮಳೆಯಿಂದ ಮನೆಗಳು ಬಿದ್ದರೆ ಕೂಡಲೇ 10 ಸಾವಿರ ಪರಿಹಾರ, ಪೂರ್ಣ ಪ್ರಮಾಣವಾಗಿ ಮನೆ ಬಿದ್ದರೆ 5 ಲಕ್ಷ, 3 ಲಕ್ಷ 50 ಸಾವಿರ ಈ ತರಹದ ಎಬಿಸಿಯಾಗಿ ಪರಿಹಾರ ಕೊಡುವ ಕೆಲಸ ಮಾಡಲಾಗುತ್ತಿದೆ. ಬೆಳೆಹಾನಿಯಾದರೆ ಜಂಟಿ ಸರ್ವೇ ಮಾಡಿ ಕೇಂದ್ರಕ್ಕೆ ವರದಿ ಕಳಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಅದರಂತೆ ಕಳೆದ ಬಾರಿಯಂತೆ ಪರಿಹಾರ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಸ್ತೆ ರಿಪೇರಿಗಳಿಗೆ ಕೂಡಲೇ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಅಧಿಕಾರಿಗಳು ಸಹಕಾರದಿಂದ ಕೆಲಸ ಮಾಡಬೇಕು. ಮತ್ತೆ ಮತ್ತೆ ಪುನಃ ಪ್ರವಾಹ ಸಮಸ್ಯೆ ಎದುರಿಸುವ ಗ್ರಾಮ ಪಂಚಾಯತಿಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲು ತಿಳಿಸಿದ್ದೇನೆ. ಮೇ ತಿಂಗಳಲ್ಲಿ ಬಿದ್ದ ಮನೆಗಳಿಗೂ ಹೊಸ ನಿಯಮದ ಅನುಸಾರ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದರು.
ಕಚ್ಚಾ ಮನೆಗಳನ್ನು ಪಕ್ಕಾ ಮನೆಗಳಾಗಿ ಮಾಡಲು ಸರ್ಕಾರ ಹಲವಾರು ವಸತಿ ಯೋಜನೆ ಮಾಡಿದೆ. ಈ ಹಿಂದಿನ ಸರ್ಕಾರದ ಕೆಲವು ತಾಂತ್ರಿಕ ತಪ್ಪಿನಿಂದ 17 ಲಕ್ಷ ಮನೆಗಳು ಹಾಗೇ ಉಳಿದಿವೆ. ಅವುಗಳನ್ನು ಮರಳಿ ಜನರಿಗೆ ಕೊಡುವ ಕೆಲಸ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.