ಬೆಂಗಳೂರು,ಜು.21- ಕಳೆದ ಕೆಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದು,ಈ ಬಾರಿ ಸಂಪುಟ ವಿಸ್ತರಣೆ ಅಥವ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಚಿವಾಕಾಂಕ್ಷಿಗಳು ಮತ್ತೆ ಕಣ್ಣರಳಿಸಿ ಕೂರುವಂತೆ ಮಾಡಿದೆ.
ಉನ್ನತ ಮೂಲಗಳ ಪ್ರಕಾರ ಸಿಎಂ ಬೊಮ್ಮಾಯಿ ಪುನಾರಚನೆ ಬದಲಾಗಿ ವಿಸ್ತರಣೆಗೆ ಒಲವು ಹೊಂದಿದ್ದು, ಒಕ್ಕಲಿಗ, ಲಿಂಗಾಯತ, ಹಿಂದುಳಿದ ಮತ್ತು ವಾಲ್ಮೀಕಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಸಿದ್ದತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳಿಗೆ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜೂಗೌಡ, ಬಸನಗೌಡ ಪಾಟೀಲ್ ಯತ್ನಾಳ್, ಪೂರ್ಣಿಮಾ ಶ್ರೀನಿವಾಸ್, ಎಂ.ಪಿ.ಕುಮಾರಸ್ವಾಮಿ, ಎನ್.ಮಹೇಶ್, ಪಿ.ರಾಜೀವ್, ಸೋಮಶೇಖರ್ ರೆಡ್ಡಿ, ಹರತಾಳ್ ಹಾಲಪ್ಪ, ಕುಮಾರ್ ಬಂಗಾರಪ್ಪ, ಎಸ್.ವಿ.ರಾಮಚಂದ್ರಪ್ಪ, ಕರುಣಾಕರ ರೆಡ್ಡಿ ಸೇರಿದಂತೆ ಹಲವು ಮಂದಿ ಆಕಾಂಕ್ಷಿಗಳು ಸಂಪುಟ ಸೇರುವ ಪ್ರಯತ್ನದಲ್ಲಿದ್ದಾರೆ.
ಭಾನುವಾರ ದೆಹಲಿಗೆ ತೆರಳುತ್ತಿರುವ ಸಿಎಂ ಬೊಮ್ಮಾಯಿ ಸೋಮವಾರ ನಡೆಯಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಭೇಟಿಗೆ ಅವಕಾಶ ದೊರೆತರೆ ಸಂಪುಟ ಪುನಾರಚನೆ ಅಥವ ವಿಸ್ತರಣೆ ಕುರಿತು ಚರ್ಚಿ ಪಟ್ಟಿಯನ್ನು ಅಂತಿಮಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಈ ಬಾರಿ ಸಂಪುಟ ವಿಸ್ತರಣೆ/ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಎರಡು ಮೂರು ದಿನಗಳಲ್ಲಿ ಯಾವುದಾದರೊಂದು ನಿರ್ಧಾರಗಳು ಹೊರ ಬೀಳುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿಯ ಸಿಎಂ ದೆಹಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ