ಬೆಂಗಳೂರು: ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಬಿಜೆಪಿ ನಾಯಕರು ಚೆಂದ ನೋಡುತ್ತಿದ್ದಾರೆ ಎಂಬ ಮಾತನ್ನು ಬಿಜೆಪಿಯ ಬೆಂಗಳೂರು ನಾಯಕರೊಬ್ಬರು ಹೇಳಿರುವುದು ಈಗಿನ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಬಿಜೆಪಿ ವಲಯದಲ್ಲಿ ತ್ವೇಷಮಯ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಕಾರ್ಯಕರ್ತರೇ ತಮ್ಮ ನಾಯಕರನ್ನು ದೂಷಿಸುತ್ತಿದ್ದಾರೆ.
ಕೊಲೆ ಕೃತ್ಯ ನಡೆಯದಂತೆ ಮುಂಜಾಗ್ರತೆ ವಹಿಸಿ ಆ ಮೂಲಕ ಕಾರ್ಯಕರ್ತರ ಸಾವನ್ನು ತಡೆಯುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ನಾಯಕರು ಏನನ್ನೂ ಮಾಡುತ್ತಿಲ್ಲ. ಕೊಲೆ ಕೃತ್ಯ ನಡೆದ ಬಳಿಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲೂ ಬಿಜೆಪಿ ಸರ್ಕಾರ ವಿಫಲವಾಗಿದೆ. ಹೀಗಾಗಿಯೇ ಹಿಂದೂಪರ ಕಾರ್ಯಕರ್ತರನ್ನು ನಿರಂತರವಾಗಿ ಕೊಲೆ ಮಾಡಲಾಗುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಪಕ್ಷ ಸಂಘಟನೆಯೇ ಕಷ್ಟವಾಗಿದೆ ಎಂದು ಕಾರ್ಯಕರ್ತರು, ಅನೇಕ ತಳಮಟ್ಟದ ನಾಯಕರು ಅಭಿಪ್ರಾಯಪಡುತ್ತಿದ್ದಾರೆ.
ನಮ್ಮ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ನಾವು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ವಿರೋಧ ಪಕ್ಷದಲ್ಲಿದ್ದಾಗಲೂ ಹೋರಾಟ ಮಾಡಬೇಕಿದೆ. ಆಡಳಿತ ಪಕ್ಷವಿದ್ದರೂ ಹೋರಾಡಬೇಕಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ನಾಯಕರೇಕೆ ಆಡಳಿತ ನಡೆಸಬೇಕು ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ.
ಈ ವೈಫಲ್ಯಗಳ ಹಿನ್ನೆಲೆಯಲ್ಲಿಯೇ ಪ್ರವೀಣ್ ಕುಟುಂಬಕ್ಕೆ ಬುಧವಾರ ಸಾಂತ್ವನ ಹೇಳಲು ಬೆಳ್ಳಾರೆಗೆ ಬಂದ ಸಚಿವ ಸುನಿಲ್‌ಕುಮಾರ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ಚುನಾವಣಾ ಪ್ರಚಾರ ವೇಳೆ ‘ನಮ್ಮ ಕಾರ್ಯಕರ್ತರನ್ನು ಮುಟ್ಟಿ ನೋಡಿ’ ಎಂದು ನಳಿನ್‌ಕುಮಾರ್ ಕಟೀಲ್ ಸವಾಲು ಹಾಕಿದ್ದ ಮಾತಿನ ವಿಡಿಯೋ ಈಗ ವೈರಲ್ ಆಗಿದೆ. ಆಗ ಮನಬಂದಂತೆ ಮಾತನಾಡಿ ಈಗ ಕಾರ್ಯಕರ್ತರ ಕೊಲೆಯಾದರೂ ಮೌನ ವಹಿಸಿರುವ ಬಿಜೆಪಿ ನಾಯಕರಿಗೆ ಕಾರ್ಯಕರ್ತರೇ ಹಿಡಿಶಾಪ ಹಾಕುತ್ತಿದ್ದಾರೆ.
ವೈರಲ್ ಆಯ್ತು ತೇಜಸ್ವಿ ಆಡಿಯೋ:
ಇದೀಗ ಬಿಜೆಪಿ ಯುವ ಮೋರ್ಚಾ ಮುಖಂಡರೊಬ್ಬರ ಜೊತೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ.
ಯುವಮೋರ್ಛಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸಂಸದ ತೇಜಸ್ವಿ ಸೂರ್ಯ ಸಾಮೂಹಿಕ ರಾಜೀನಾಮೆ ಕುರಿತಂತೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮುಖಂಡ ಸಂದೀಪ್ ಅವರ ಜೊತೆ ಫೋನ್ ಸಂಭಾಷಣೆ ವೇಳೆ ‘ಕಾಂಗ್ರೆಸ್ ಸರ್ಕಾರ ಇರ್ತಿದ್ರೆ ಕಲ್ಲು ಹೊಡೆಯಬಹುದಿತ್ತು. ಆದರೆ ಏನು ಮಾಡುವುದು. ನಮ್ಮದೇ ಸರ್ಕಾರವಿದೆ. ಎಲ್ಲರೂ ಸೇರಿ ಸಿಎಂ ಭೇಟಿ ಮಾಡೋಣ’ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಚೆಂದ ನೋಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ
Previous Articleಶಿವಕುಮಾರ್ ಅವರಿಗೆ ಕಾದಿದೆಯಾ ಸಂಕಷ್ಟ…!?
Next Article ಬಿಬಿಎಂಪಿ ಚುನಾವಣೆ: ವಾರದಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಿ…