ಯೋಗರಾಜ್ ಭಟ್ ನಿರ್ದೇಶನದ ʼಗಾಳಿಪಟ-2ʼ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಯನ್ನು ಚಿತ್ರದ ಹಾಡು ಹಾಗು ಕ್ಯಾರೆಕ್ಟರ್ ಟೀಸರ್ ದುಪ್ಪಟ್ಟುಗೊಳಿಸಿದೆ.
ಹೊಸ ಬಗೆಯ ಕಥೆಯಿಂದ ʼಗಾಳಿಪಟ-2ʼ ಗಮನ ಸೆಳೆಯುತ್ತಿದೆ. ನೀನು ಬಗೆಹರಿಯದ ಹಾಡುʼ, ʼದೇವ್ಲೆ ದೇವ್ಲೆʼ, ʼಎಕ್ಸಾಂ ಹಾಡುʼ ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡು ಸೂಪರ್ ಹಿಟ್ ಸಾಲಿಗೆ ಸೇರಿದೆ.
ʼನೀರುಕೋಟೆʼ ಎಂಬ ಊರಿನಲ್ಲಿ ನಡೆಯುವ ಮೂರು ಜನರ ಸ್ನೇಹಿತರ ಬದುಕಿನ ಕಹಾನಿಯನ್ನು ಹಾಸ್ಯ, ಭಾವನೆ ತುಂಬಿದ ಸಂಭಾಷಣೆ ಹಾಗು ಜೀವನ ಪಾಠವನ್ನು ಹೇಳುವ ಮೇಷ್ಟ್ರ ಮೂಲಕ ಯೋಗರಾಜ್ ಭಟ್ ಟ್ರೇಲರ್ ನಲ್ಲಿ ಹೇಳಿದ್ದಾರೆ.
ʼಗಾಳಿಪಟʼದಲ್ಲಿ ಬೇಟೆಗಾರನಾಗಿದ್ದ ಅನಂತ್ ನಾಗ್ ಇಲ್ಲಿ ಕನ್ನಡ ಮೇಷ್ಟ್ರು ಕಿಶೋರ್ ಆಗಿದ್ದಾರೆ. ಇವರ ಸ್ಕೂಲಿಗೆ ಬರುವ ಮೂವರು ವಿದ್ಯಾರ್ಥಿಗಳು, ಒಬ್ಬ ತುಂಟ ಗಣಿ, ಮತ್ತೊಬ್ಬ ಕೋಪಿಷ್ಟ ದಿಗಿ, ಇನ್ನೊಬ್ಬ ಶಾಂತ ಸ್ವಭಾವದ ಭೂಶಿ. ಈ ಮೂರು ಜನರ ಬಾಳಿನ ಕಥೆಯನ್ನು ʼಗಾಳಿಪಟ-2ʼ ವಿನ ಟ್ರೇಲರ್ ನಲ್ಲಿ ಝಲಕ್ ಬಿಟ್ಟಿದ್ದಾರೆ.
ಇನ್ನು ಗಾಳಿಪಟ ಮೊದಲ ಭಾಗದ ಮೆಲುಕು ಟ್ರೇಲರ್ ನಲ್ಲಿದೆ. ಮುಗಿಲುಪೇಟೆ ಊರಿನ ಹಿನ್ನೆಲೆಯೂ ಚಿತ್ರದಲ್ಲಿರಲಿದೆ ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ.
ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್, ವೈಭವಿ ಶಾಂಡಿಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಪದ್ಮಜಾ ರಾವ್,ಶ್ರೀನಾಥ್, ಪ್ರಕಾಶ್ ತುಮಿನಾಡು ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.