ಈ ವಾರ ತೆರೆಗೆ ಬರಲು ಸಜ್ಜಾಗಿದ್ದ ನಟ ‘ಡಾಲಿ’ ಧನಂಜಯ್ ಹಾಗೂ ನಟಿ ರಚಿತಾ ರಾಮ್ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದೆ.
ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ಅವರು ನಟಿಸಿರುವ ಮಾನ್ಸೂನ್ ರಾಗ
ಚಿತ್ರದ ರಿರಿಕಾರ್ಡಿಂಗ್, ಸೌಂಡ್ ಎಫೆಕ್ಟ್ಸ್ ಕೆಲಸಗಳು ಬಾಕಿ ಉಳಿದಿದ್ದು, ಪ್ರೇಕ್ಷಕರಿಗೆ ಒಳ್ಳೆಯ ಸಂಗೀತದ ಅನುಭವವನ್ನು ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ನಿರ್ದೇಶಕ ಎಸ್.ರವೀಂದ್ರನಾಥ್.
ಸಿನಿಮಾದ ಶೇ 80ರಷ್ಟು ಭಾಗವನ್ನು ನಾವು ಮಳೆಯಲ್ಲಿಯೇ ಚಿತ್ರೀಕರಿಸಿರುವುದರಿಂದ, ಮಳೆಯ ಶಬ್ದ ಮತ್ತು ಸಂಗೀತವನ್ನು ಸೂಕ್ತವಾಗಿ ಜೋಡಿಸಬೇಕು. ಸುತ್ತ ಮಳೆ ಸುರಿಯುತ್ತಿದ್ದು ಅದರ ನಡುವೆ ಕುಳಿತು ಸಂಗೀತ ಕೇಳಿದ ಅನುಭವ ಪ್ರೇಕ್ಷಕನಿಗೆ ಆಗಬೇಕು. ಇದಕ್ಕೆ ಒಂದಷ್ಟು ಸಮಯಾವಕಾಶ ಬೇಕು. ಒಂದೆರಡು ವಾರದೊಳಗೆ ಸಿನಿಮಾ ಬಿಡುಗಡೆ ಆಗಲಿದೆ. ತುಂಬಾ ಮುಂದಕ್ಕೆ ಹಾಕುವುದಿಲ್ಲ’ ಎಂದು ನಿರ್ಮಾಪಕ ವಿಖ್ಯಾತ್ ತಿಳಿಸಿದ್ದಾರೆ. ‘ಸಿನಿಮಾದ ವ್ಯವಹಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಇದೇ ವೇಳೆ ಅವರು ಸ್ಪಷ್ಟನೆ ನೀಡಿದ್ದಾರೆ.
‘ಮಾನ್ಸೂನ್ ರಾಗ’ ಸಿನಿಮಾ ಮೂಲಕ ಧನಂಜಯ್ ಮತ್ತು ರಚಿತಾ ಮೊದಲ ಬಾರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.