ಬೆಂಗಳೂರು
ಇದೊಂದು ಪ್ರತಿಷ್ಟೆಗಾಗಿ ನಡೆದ ಗಲಾಟೆ.ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಸಣ್ಣ ಅಪಘಾತ ಸಂಭವಿಸಿದೆ. ನಂತರ ನಡೆದ ಕ್ಷುಲಕ ಕಾರಣದ ವಾಗ್ವಾದ ರಾದ್ಧಾಂತವಾಗಿ ಪರಿಣಮಿಸಿದೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ದರ್ಶನ್ ಎಂಬುವವರು ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು ಶ್ವೇತಾ ಎಂಬವವರು ಚಲಾಯಿಸುತ್ತಿದ್ದ ಟಾಟಾ ನಿಕ್ಸಾನ್ ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿದೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ.ಇದರ ನಡುವೆ ಮಾತಿನ ಭರದಲ್ಲಿ ಶ್ವೇತಾರವರು ದರ್ಶನ್ ಗೆ ಮಧ್ಯ ಬೆರಳನ್ನು ತೋರಿಸಿ ಕೆಟ್ಟದಾಗಿ ವರ್ಣಿಸಿದ್ದಾರೆ . ಇದರಿಂದ ದರ್ಶನ್ ಕೋಪಗೊಂಡು ಶ್ವೇತಾರವರ ಕಾರ್ ಅನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಸ್ನೇಹಿತರಿಗೂ ಮಾಹಿತಿ ನೀಡಿ ಬರುವಂತೆ ಹೇಳಿದ್ದಾರೆ.
ಶ್ವೇತಾ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದ ದರ್ಶನ್ ಮಂಗಳೂರು ಪಿಯು ಕಾಲೇಜ್ ಬಳಿ ಕಾರನ್ನು ಅಡ್ಡಗಟ್ಟಿ ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ಶ್ವೇತಾರವರು ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ದರ್ಶನ್ ಆಕೆಯ ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತಿದ್ದಾರೆ.
ಇದನ್ನು ಲೆಕ್ಕಿಸದ ಶ್ವೇತಾ ತಮ್ಮ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋಗಿದ್ದಾರೆ. ಆ ಕಾರಿನ ಬಾನೆಟ್ ಮೇಲೆ ದರ್ಶನ್ ಕುಳಿತಿದ್ದು ಶ್ವೇತಾ ಸುಮಾರು ಒಂದು ಕಿಲೋಮೀಟರ್ ವರೆಗೂ ಚಲಾಯಿಸಿಕೊಂಡು ಹೋಗಿದ್ದಾರೆ. ಜೊತೆಗೆ ತಮ್ಮ ಪತಿಗೆ ಕರೆ ಮಾಡಿದ್ದಾರೆ.
ಈ ವೇಳೆ ದರ್ಶನ್ ಸ್ನೇಹಿತರು ದ್ವಿಚಕ್ರ ವಾಹನಗಳಲ್ಲಿ ದೌಡಾಯಿಸಿ ಬಂದು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.ಅಷ್ಟೇ ಅಲ್ಲ ಶ್ವೇತಾ ಅವರ ಕಾರಿನ ಗ್ಲಾಸುಗಳನ್ನೂ ಹೊಡೆದು ಹಾಕಿದ್ದಾರೆ.
ಈ ವೇಳೆ ಶ್ವೇತಾ ಅವರ ಪತಿ ಪ್ರಮೋದ್ ಸ್ಥಳಕ್ಕೆ ಧಾವಿಸಿದ್ದು ಗಲಾಟೆ ಜೋರಾಗಿದೆ.ದರ್ಶನ್ ಸ್ನೇಹಿತರು ಪ್ರಮೋದ್ ಮೇಲೆ ಹಲ್ಲೆ ಮಾಡಿದ್ದಾರೆ.
ರಸ್ತೆಯಲ್ಲಿ ನಡೆಯುತ್ತಿದ್ದ ಗಲಾಟೆಯ ಮಾಹಿತಿ ಪಡೆದು ಜ್ಞಾನ ಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡೂ ಕಡೆಯವರನ್ನು ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿಕೊಂಡಿದ್ದಾರೆ. ಶ್ವೇತಾ ಅವರು ನೀಡಿದ ದೂರುನ್ನು ಆಧರಿಸಿ ದರ್ಶನ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.ಅದೇ ರೀತಿಯಲ್ಲಿ ದರ್ಶನ್ ನೀಡಿದ ದೂರನ್ನು ಆಧರಿಸಿ ಶ್ವೇತಾ ಅವರನ್ನು ವಶಕ್ಕೆ ಪಡೆದಿದ್ದಾರೆ ಒಟ್ಟಾರೆ ಈ ಪ್ರಕರಣ ಸಂಬಂಧ 5 ಮಂದಿಯ ಬಂಧನವಾಗಿದೆ.
ಪ್ರತಿಷ್ಟೆಗಾಗಿ ರಸ್ತೆಯ ಮೇಲೆ ನಡೆದ ರಾದ್ಧಾಂತ
Previous ArticleAl Qaeda ಜೊತೆ ನಂಟು ಹೊಂದಿದ್ದ Tilak Nagar ಯುವಕರು
Next Article ಎಂಜಿನಿಯರಿಂಗ್ ವೈಫಲ್ಯ Metro ದುರಂತಕ್ಕೆ ಕಾರಣ