ಚಿಕ್ಕಬಳ್ಳಾಪುರ, ಜ. 24-
‘ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ’ಸಿದ್ದರಾಮಯ್ಯನವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾದಳದಲ್ಲಿದ್ದು, ಎಲ್ಲಾ ಬಗೆಯ ಅಧಿಕಾರ ಅನುಭವಿಸಿದ ಅವರು, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಏಕೆ ಬಂದರು? ಆಶಯಕ್ಕಾ? ಬದ್ಧತೆಗಾ? ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ? ಇಷ್ಟು ವಯಸ್ಸಾಗಿರುವವರೇ ಹೀಗೆ ಮಾಡುವಾಗ, ಯುವಕರಾದವರು ನಾವೇನು ಮಾಡಬೇಕು?’ ಎಂದು ಪ್ರಶ್ನಿಸಿದರು.
‘ಪ್ರಜಾಧ್ವನಿ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ವೈಯಕ್ತಿಕ ಆರೋಪವನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳಾಗಿದ್ದವರು, ಸಚಿವರಾಗಿದ್ದವರು, ಜನಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಹೇಗೆ ಮಾತಾಡಬೇಕೆಂದು ಮೊದಲು ಕಲಿಯಬೇಕು. ಬಾರ್‌ನಲ್ಲಿ ಕುಡಿದು ಬಂದಂತೆ ಸಭೆಯಲ್ಲಿ ಮಾತನಾಡಬಾರದು’ ಎಂದರು. ‘ಸಿದ್ದರಾಮಯ್ಯನವರು ಒಂದೊಂದೇ ಕ್ಷೇತ್ರ ಹುಡುಕಾಡುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಳಿಕ ಕೋಲಾರಕ್ಕೆ ಹೋಗಿದ್ದಾರೆ. ಪ್ರತಿ ಬಾರಿ ಅನ್ನಭಾಗ್ಯ ಕೊಟ್ಟೆ, ಅಕ್ಕಿ ಕೊಟ್ಟೆ ಎಂದು ಹೇಳುತ್ತಾರೆ. ವಾಸ್ತವ ಏನೆಂದರೆ, ಈ ಯೋಜನೆಯಲ್ಲಿ ಒಂದು ಕೆಜಿ ಅಕ್ಕಿಗೆ 32 ರೂ.ನಲ್ಲಿ 29 ರೂ. ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡುತ್ತಿದೆ.ಆದರೆ ಪ್ರಧಾನಿ ಮೋದಿ ಅದನ್ನು ಹೇಳಿಕೊಳ್ಳಲೇ ಇಲ್ಲ. ಸಿದ್ದರಾಮಯ್ಯನವರು ಅಕ್ಕಿ ನೀಡಲಿಲ್ಲ, ಕೇವಲ ಚೀಲ ನೀಡಿದರು’ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್‌ನಲ್ಲಿ ನನಗೆ ಟಿಕೆಟ್ ದೊರೆಯುವಲ್ಲಿ ಸಿದ್ದರಾಮಯ್ಯನವರ ಪಾತ್ರವೇ ಇಲ್ಲ. ನನಗೆ 2013ರಲ್ಲಿ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರುಗಳಾದ ಎಸ್.ಎಂ.ಕೃಷ್ಣ ಹಾಗೂ ಡಾ.ಜಿ.ಪರಮೇಶ್ವರ್. ನಾನು ಸಿದ್ದರಾಮಯ್ಯನವರ ಬಳಿ ಟಿಕೆಟ್ ಗಾಗಿ ಯಾವ ಸಹಾಯವನ್ನೂ ಕೇಳಿಯೇ ಇಲ್ಲ. ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿದ್ದೆ. ಆದರೆ ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ’ ಎಂದರು.
‘ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದನ್ನು ನಾನು ಕೇಳಿದ್ದೇನೆ. ಬಿಬಿಎಂಪಿಯಲ್ಲಿ ಕಸ ವಿಲೇವಾರಿಗೆ ಟೆಂಡರ್ ಮೊತ್ತ ಹೆಚ್ಚಳ ಮಾಡಿದ್ದು ಏಕೆ ಎಂದು ಕೇಳಿದ್ದೆ. ಆದರೆ ಅದಕ್ಕೆ ಯಾರೂ ಉತ್ತರ ನೀಡಲಿಲ್ಲ.. ಆದರೆ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ಕೇವಲ ರಾಜಕೀಯ ಕೆಸರೆರಚಾಟ ಮಾಡುತ್ತಾರೆ. ಅವರು ಮುಖ್ಯಮಂತ್ರಿಯಾಗಲು ನನ್ನ ಸಹಕಾರವೂ ಕಾರಣ’ ಎಂದರು.