ನವದೆಹಲಿ
ಬಹುನಿರೀಕ್ಷಿತ ಏಳನೇ ಆವೃತ್ತಿಯ ನವದೆಹಲಿ ಮ್ಯಾರಥಾನ್ ಫೆಬ್ರವರಿ 26ರಂದು ಭಾನುವಾರ ನಡೆಯಲಿದೆ. ಇದು ಕ್ರೀಡಾ ಪ್ರೇಮಿಗಳಲ್ಲಿ ಸಂಭ್ರಮ ಹಾಗೂ ಉತ್ಸಾಹಕ್ಕೆ ಕಾರಣವಾಗಿದೆ. ಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನಾದ ಹಾಂಗ್ಝೂ (Hangzhou) ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ (Asian Games) ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ದೇಶದ ಅಗ್ರಮಾನ್ಯ ಓಟಗಾರರು ಈ ಮ್ಯಾರಥಾನ್ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ( Athletics Federation of India ) ಹಾಗೂ ಫಿಟ್ ಇಂಡಿಯಾ (FIT INDIA) ದ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಮ್ಯಾರಥಾನ್ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಆರಂಭಗೊಂಡು, ಅಲ್ಲೇ ಮುಕ್ತಾಯಗೊಳ್ಳಲಿದೆ. ದೆಹಲಿಯ ಚಳಿಗಾಲದಲ್ಲಿ ನಡೆಯಲಿರುವ ಮ್ಯಾರಥಾನ್ ನಗರದ ಐತಿಹಾಸಿಕ ತಾಣಗಳಾದ ಹುಮಾಯುನ್ ಸ್ಮಾರಕ (Humayun’s Tomb), ಲೋಧಿ ಗಾರ್ಡನ್ (Lodhi Garden) ಹಾಗೂ ಖಾನ್ ಮಾರ್ಕೆಟ್ (Khan Market) ಮೂಲಕ ಸಾಗಲಿದೆ.ಈ ಓಟವು ವಿಕಲಚೇತನರ ಪಾಲ್ಗೊಳ್ಳುವಿಕೆಗೂ ಸಾಕ್ಷಿಯಾಗಲಿದ್ದು, ಹಲವು ಹವ್ಯಾಸಿ ಓಟಗಾರರು ಸಹ ಭಾಗವಹಿಸಲಿದ್ದಾರೆ.
ಮತ್ತೊಂದು ವಿಶೇಷ ಎಂದರೆ, ವರ್ಚುವಲ್ ಮ್ಯಾರಥಾನ್ ಮೂಲಕ 50,000ಕ್ಕೂ ಹೆಚ್ಚು ಮಂದಿ ವಿಶ್ವದ ವಿವಿಧ ಭಾಗಗಳಿಂದ 5 ದಿನಗಳ ವರೆಗೂ ಸ್ಪರ್ಧಿಸಲಿದ್ದಾರೆ. ಈ ಓಟವು ಫೆಬ್ರವರಿ 21ರಂದು ಆರಂಭಗೊಳ್ಳಲಿದೆ.
ಸ್ಪರ್ಧೆಯು ನಾಲ್ಕು ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಪೂರ್ಣ ಮ್ಯಾರಥಾನ್, ಅರ್ಧ ಮ್ಯಾರಥಾನ್, 10ಕೆ ಮ್ಯಾರಥಾನ್ ಹಾಗೂ 5ಕೆ ಮ್ಯಾರಥಾನ್ ಅಲ್ಲದೆ ಸುಮಾರು 25 ಅಂಧ ಅಥ್ಲೀಟ್‌ಗಳು ತಮ್ಮ ಮಾರ್ಗದರ್ಶಕರ ಜೊತೆ ಓಡಲಿದ್ದಾರೆ. ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್‌ಗಳಾದ ಅರ್ಜುನ ಪ್ರಶಸ್ತಿ ವಿಜೇತ ಅಂಕುರ್ ಧಾಮ ಹಾಗೂ ಪ್ಯಾರಾಲಿಂಪಿಕ್ ಪದಕ ವಿಜೇತ ರಮಣ್‌ಜೀ 10ಕೆ ಓಟದಲ್ಲಿ ಸ್ಪರ್ಧಿಸಲಿದ್ದಾರೆ. ಅಂಧ ಓಟಗಾರರಿಗೆ ಗೈಡ್ ರನ್ನರ್ಸ್ ಇಂಡಿಯಾ (Guide Runners India) ತಂಡವು ಮಾರ್ಗದರ್ಶಕರನ್ನು ಒದಗಿಸಲಿದೆ. ಈ ತಂಡವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿಕಲಚೇತನರಿಗೆ ಫಿಟ್ನೆಸ್ ತರಬೇತಿಯ ಬಗ್ಗೆ ಮಾಹಿತಿಯನ್ನೂ ಒದಗಿಸಲಿದೆ.
ದಿ ಚಾಲೆಂಜಿಂಗ್ ಒನ್ಸ್ (The Challenging Ones) ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ಮತ್ತೊಂದು ವಿಕಲಚೇತನರ ತಂಡ. ಈ ತಂಡವನ್ನು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ ಹಾಗೂ ಅಂಗವಿಚ್ಛೇದಿತ ಕ್ರೀಡಾಪಟು ಮೇಜರ್ ಡಿ.ಪಿ.ಸಿಂಗ್ (Major D.P. Singh) ಮುನ್ನಡೆಸಲಿದ್ದಾರೆ. ‘ರಾಷ್ಟ್ರೀಯ ಮ್ಯಾರಥಾನ್‌ಗೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ. ನಮ್ಮ ಅಥ್ಲೀಟ್‌ಗಳು ದೇಶದ ಕೀರ್ತಿ ಹೆಚ್ಚಿಸುತ್ತ ಇರಲಿದ್ದಾರೆ ಎನ್ನುವ ವಿಶ್ವಾಸವಿದೆ. ವರ್ಚುವಲ್ ಸ್ಪರ್ಧೆಗೂ ಈ ಪ್ರಮಾಣದಲ್ಲಿ ಪ್ರತಿಕ್ರಿಯೆ ದೊರೆಯುತ್ತಿರುವುದನ್ನು ನೋಡಿ ಬೆರಗಾಗಿದ್ದೇವೆ’ ಎಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‌ನ ಅಧ್ಯಕ್ಷ ಅಡಿಲೆ ಸುಮರಿವಾಲಾ (Adille Sumariwalla) ಹೇಳಿದ್ದಾರೆ.