ಬೆಂಗಳೂರು, ಫೆ.7-
ಸಿಲಿಕಾನ್ ಸಿಟಿ ಬೆಂಗಳೂರಿನ ಎಟಿಎಂ (ATM) ಗಳಿಗೆ ತುಂಬಬೇಕಿದ್ದ 1 ಕೋಟಿ 3 ಲಕ್ಷ ಹಣದೊಂದಿಗೆ ಎಟಿಎಂ ಕಸ್ಟೋಡಿಯನ್ (ATM Custodian) ಪರಾರಿಯಾಗಿರುವ ಘಟನೆ ನಡೆದಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ರಾಜೇಶ್ ಮೆಸ್ತಾ ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ (Securevalue India Limited – SVIL) ಎಂಬ ಎಜೆನ್ಸಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಮೂರ್ನಾಲ್ಕು ಪ್ರದೇಶಗಳ ಎಟಿಎಂ ಗಳಿಗೆ ಹಣ ತುಂಬುವ ಕೆಲಸವನ್ನು ಈತನಿಗೆ ನೀಡಲಾಗಿತ್ತು.
ಹಣ ತುಂಬುವ ವೇಳೆ ನಿಗದಿತ ಮೊತ್ತಕ್ಕೆ ಬದಲಾಗಿ ಒಂದು ಎಟಿಎಂ ಕೇಂದ್ರಕ್ಕೆ 50 ಸಾವಿರ ಹಣ ತುಂಬುವ ಬದಲು 25 ಸಾವಿರ, ಹಾಗೆಯೇ ಮತ್ತೊಂದು ಕೇಂದ್ರಕ್ಕೆ ಒಂದು ಲಕ್ಷ ತುಂಬುವ ಬದಲು 50 ಸಾವಿರ ಹಣ ಮಾತ್ರ ತುಂಬುತ್ತಿದ್ದನು. ಹೀಗೆ ಪ್ರತಿ ಬಾರಿಯೂ ಅರ್ಧದಷ್ಟು ಹಣವನ್ನು ಮಾತ್ರ ಎಟಿಎಂ ಕೇಂದ್ರಗಳಿಗೆ ತುಂಬಿ ನಂತರ ಯಾರಿಗೂ ಅನುಮಾನ ಬಾರದಂತೆ ಉಳಿದ ಹಣವನ್ನು ತನ್ನ ಬ್ಯಾಂಕ್ ಅಕೌಂಟ್‍ಗಳಿಗೆ ಹಾಕಿಕೊಂಡಿದ್ದಾನೆ. ಹೀಗೆ ಬರೋಬ್ಬರಿ ಒಂದು ಕೋಟಿ 3 ಲಕ್ಷ ಹಣವನ್ನು ಸಂಗ್ರಹಿಸಿಕೊಂಡು ತದನಂತರ ಕೆಲಸಕ್ಕೆ ಹಾಜರಾಗಿರಲಿಲ್ಲ.
ಕೆಲ ದಿನಗಳಿಂದ ಕರ್ತವ್ಯಕ್ಕೆ ಗೈರಾಗಿದ್ದರಿಂದ ತಕ್ಷಣ ಆತನ ಮೊಬೈಲ್ ಸಂಪರ್ಕಿಸಿದಾಗ Switch off ಆಗಿದೆ. ಎಜೆನ್ಸಿಗೆ ಅನುಮಾನ ಬಂದು ಕೇಂದ್ರಗಳಿಗೆ ಹಾಕಲು ನೀಡಿದ್ದ ಹಣದ ಬಗ್ಗೆ ಪರಿಶೀಲಿಸಿದಾಗ ಹಣ ದೋಚಿಕೊಂಡು ಹೋಗಿರುವುದು ಗೊತ್ತಾಗಿದೆ. ಆತನ ಅಕೌಂಟ್ ಪರಿಶೀಲಿಸಿದಾಗ 1.3 ಕೋಟಿ ಹಣ ಡ್ರಾ ಮಾಡಿಕೊಂಡಿದ್ದು, ಕೇವಲ 23 ರೂ. ಮಾತ್ರ ಇರುವುದು ಕಂಡು ಬಂದಿದೆ. ಈ ಬಗ್ಗೆ ಎಜೆನ್ಸಿ ಅವರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಠಾಣಾ ಪೊಲೀಸರು ಶೋಧ ಕೈಗೊಂಡಿದ್ದಾರೆ. ಆರೋಪಿ ರಾಜೇಶ್ ಮೆಸ್ತಾ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯೋನ್ಮುಖವಾಗಿವೆ.