ಬೆಂಗಳೂರು,ಫೆ.20-
IPS ಅಧಿಕಾರಿ ಡಿ.ರೂಪಾ (D Roopa) ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಡಿ.ರೂಪಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದು, ಸಿಂಧೂರಿ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅವರ ವಿರುದ್ಧ ತಾವು ಮಾಡಿರುವ ಆರೋಪಗಳು ಸಂಪೂರ್ಣ ಸತ್ಯವಾಗಿದ್ದು,ಈ ಬಗ್ಗೆ ತನಿಖೆಗೆ ಆದೇಶಿಸಬೇಕು. ತನಿಖೆಯ ಸಮಯದಲ್ಲಿ ತಮ್ಮ ಬಳಿ ಇರುವ ಎಲ್ಲಾ ಸಾಕ್ಷಿ ನೀಡುವೆ. ಒಂದು ವೇಳೆ ವಿಚಾರಣೆಗೆ ಆದೇಶಿಸಿದರೆ ಸಾಕ್ಷಿಯಾಗಿ ವಿವರಣೆ ನೀಡಲು ಸಿದ್ಧಳಿದ್ದೇನೆ ಎಂದು ತಿಳಿಸಿದ್ದಾರೆ.
ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಉಂಟಾದ ಈಜುಕೊಳ ನಿರ್ಮಾಣ ವಿವಾದವನ್ನು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವ ಡಿ.ರೂಪಾ, ಈ ಬಗ್ಗೆ IAS ಅಧಿಕಾರಿ ಡಾ.ರವಿಶಂಕರ್ (Dr. J. Ravishanka) ನೀಡಿರುವ ತನಿಖಾ ವರದಿ ಆಧರಿಸಿ ಶಿಸ್ತು ಕ್ರಮ ಜರುಗಿಸಬೇಕು. ಈ ವರದಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಿಂಧೂರಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವುದು, ಅಧಿಕಾರ ದುರ್ಬಳಕೆ ಮಾಡಿರುವುದು ಸಾಬೀತಾಗಿದೆ. ಹೀಗಿದ್ದರೂ ಇಲ್ಲಿಯವರೆಗೂ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತನಿಖಾ ವರದಿ ಸಲ್ಲಿಸಲು, ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗುವಂತೆ ಮಾಡುತ್ತಿರುವವರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸಿಂಧೂರಿ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆಗೆ ಅನುಮತಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಅನುಮತಿ ನೀಡಲು ನಿರಾಕರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿ ಕೆಲವು ಗಂಭೀರ ಆರೋಪಗಳಿದ್ದು ಇವುಗಳ ತನಿಖೆಯಾಗಬೇಕು ಎಂದಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ನಿವಾಸದಿಂದ ಇವರು ಸರ್ಕಾರದ ಕೆಲವು ಪೀಠೋಪಕರಣಗಳನ್ನು ತೆಗೆದುಕೊಂಡು ಬಂದಿರುವ ಬಗ್ಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ನೀಡಿರುವ ವರದಿ ಆಧರಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿ ಇವರ ಪತಿ ಮತ್ತು ಮಾವ ನಿರ್ಮಿಸುತ್ತಿರುವ ಐಷಾರಾಮಿ ಮನೆಗೆ ಪೀಠೋಪಕರಣ ಹಾಗೂ ಒಳಾಂಗಣ ವಿನ್ಯಾಸಕ್ಕೆ ಮಾಡಿರುವ ವೆಚ್ಚ, ಅದಕ್ಕೆ ಇವರು ನೀಡಿರುವ ಕೋಟಿ, ಕೋಟಿ ಹಣದ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ. ಇದು ನಿಗದಿತ ಆದಾಯದ ಮೂಲ ಮೀರಿ ನಿರ್ಮಿಸುತ್ತಿರುವ ಕಟ್ಟಡವಾಗಿದ್ದು ಈ ಆದಾಯದ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಷ್ಟೇ ಅಲ್ಲ ಮುಜರಾಯಿ ಇಲಾಖೆಯ ವತಿಯಿಂದ ತಿರುಪತಿಯಲ್ಲಿ ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನದ ನಿರ್ಮಾಣ ನಕ್ಷೆಗೆ ಒಂದು ಕೋಟಿ ರೂಪಾಯಿ ನೀಡಲಾಗಿದೆ, ಇದಕ್ಕೆ ಯಾವುದೇ ಟೆಂಡರ್ ಕರೆದಿಲ್ಲ. ಆಹಾರ ಇಲಾಖೆಯಲ್ಲಿದ್ದ ವೇಳೆ ಎರಡು ಕೋಟಿ ಟನ್ ಸಕ್ಕರೆ ಕಣ್ಮರೆ ಕುರಿತು ಹಿರಿಯ ಅಧಿಕಾರಿ ಹರ್ಷಗುಪ್ತ (Harsha Gupta) ನೀಡಿರುವ ವರದಿಯ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ.
ಇದಷ್ಟೇ ಅಲ್ಲದೆ ಶಾಸಕ ಸಾ.ರಾ. ಮಹೇಶ್ (Sa Ra Mahesh) ಜೊತೆಗಿನ ರಾಜಿ ಸಂಧಾನ ಸಂಪೂರ್ಣ ನಿಯಮ ಬಾಹಿರ, ಸರ್ಕಾರದ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಿಂಧೂರಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.