ಬೆಂಗಳೂರು,ಫೆ.26- ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಆದೇಶಿಸಲಾಗಿದೆ.
ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿಯಲ್ಲಿ ಪ್ರಥಮ ಪಿ.ಯು.ಸಿ. ಪರೀಕ್ಷೆ ಮುಂದೂಡಲಾಗಿದೆ.ಪ್ರಧಾನಿ ರೋಡ್ ಶೋ ಮತ್ತು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು ಅದರಲ್ಲಿ ಎಲ್ಲಾ ವಿಧ್ಯಾರ್ಥಿಗಳೂ ಪಾಲ್ಗೊಳ್ಳುವಂತೆ ಆದೇಶಿಸಲಾಗಿದೆ.ಸರ್ಕಾರದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲೂ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಸರ್ಕಾರದ ಈ ಆದೇಶದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ವಿದ್ಯಾರ್ಥಿಗಳೇನು ಬಿಜೆಪಿಯ ಕಾಲಾಳುಗಳೇ?, ಪರೀಕ್ಷೆಯ ಆತಂಕದಲ್ಲಿರುವ ವಿದ್ಯಾರ್ಥಿಗಳನ್ನು ಖಾಲಿ ಕುರ್ಚಿ ತುಂಬಿಸಲು ಕರೆಸುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದೆ.
ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಸಮವಸ್ತ್ರ ಹಾಗೂ ಕಪ್ಪು ಬಟ್ಟೆ ಧರಿಸಬಾರದು ಎಂದಿರುವುದೇಕೆ?, ವಿದ್ಯಾರ್ಥಿಗಳ ಗುರುತು ಸಿಕ್ಕರೆ ಸರ್ಕಾರದ ಮರ್ಯಾದೆ ಹೋಗುತ್ತದೆ ಎಂಬ ದುರಾಲೋಚನೆಯೇ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪ್ರಧಾನಿ ಹೇಳುವುದು ‘ಪರೀಕ್ಷಾ ಪೇ ಚರ್ಚಾ’ ಮಾಡುವುದು ‘ಪರೀಕ್ಷಾ ಮೇ ಆಕ್ರಮಣ್’ ಪ್ರಧಾನಿಯ ರೋಡ್ ಶೋಗಾಗಿ ಪ್ರಥಮ ಪಿಯುಸಿಯ ಪರೀಕ್ಷೆಗಳನ್ನು ಮುಂದೂಡಿದ ಬಿಜೆಪಿ ಸರ್ಕಾರ, ವಿದ್ಯಾರ್ಥಿಗಳ ಬದುಕಿಗೆ ಕಲ್ಲು ಹಾಕಲು ಹೇಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮೋದಿಯ ಪ್ರಚಾರದ ಹಪಹಪಿತನಕ್ಕೆ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಶಿಕ್ಷಣವಿಲ್ಲದವರಿಗೆ ಶಿಕ್ಷಣದ ಮಹತ್ವ ಅರಿಯುವುದುದಾದರೂ ಹೇಗೆ, ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಶೋಕಿ ನಡೆಸಲು ಹೊರಟಿರುವ ಬೊಮ್ಮಾಯಿ ಅವರೇ, ತಮಗೆ ಚುನಾವಣಾ ಪ್ರಚಾರ ಮುಖ್ಯವೇ? ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೇ? ಎಂಬುದನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಗಾಂಪರ ಗುಂಪಾದ ಬಿಜೆಪಿಗೆ ತಿಳಿದಿರುವುದು ಕಮಿಷನ್ ಲೂಟಿಯೇ ಹೊರತು ಶಿಕ್ಷಣದ ಮಹತ್ವವಲ್ಲ. ಶಿವಮೊಗ್ಗದ ಪ್ರಧಾನಿ ಕಾರ್ಯಕ್ರಮದ ಕುರ್ಚಿ ತುಂಬಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕರೆಸಲು ಆದೇಶಿಸಿದೆ. ಬೆಳಗಾವಿಯಲ್ಲಿ ಪಿಯುಸಿ ಪರೀಕ್ಷೆಯನ್ನೇ ಮುಂದೂಡಿದೆ. ಪ್ರಧಾನಿಯ ಶೋಕಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೊಡುವುದು ನಾಚಿಕೆಗೇಡು’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪ್ರಧಾನಿ ಕಾರ್ಯಕ್ರಮಕ್ಕೆ ಹಾಜರಿ ಕಡ್ಡಾಯ -ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ
Previous Articleಪತ್ನಿಯ ಕೊಂದು ಬ್ಯಾರಲ್ ನಲ್ಲಿ ಶವ ಇಟ್ಟ ಪತಿರಾಯ
Next Article ಚುನಾವಣೆಗೆ ನೆತ್ತರೋಕುಳಿ

