ಬೆಂಗಳೂರು,ಮಾ.13-
ಒಂದಲ್ಲಾ ಒಂದು ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.ಕಳ್ಳತನ, ಕೊಲೆ,ಸುಲಿಗೆ,ದರೋಡೆ, ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವುದು ಮಾಮೂಲು ಆದರೆ ಇಲ್ಲೊಂದು ವಿಚಿತ್ರ ಪ್ರಕರಣವಿದೆ.
ಪತ್ನಿಯ ವಿಪರೀತ ನಿದ್ರೆ ಕಾಟಕ್ಕೆ ಬೇಸತ್ತು ಆಕೆಯ ವಿರುದ್ಧ ಪತಿ ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಮ್ರಾನ್ ಖಾನ್ ಎಂಬುವವರು ಪೊಲೀಸರಿಗೆ ತನ್ನ ಪತ್ನಿ ವಿರುದ್ಧ ದೂರು ನೀಡಿದ್ದಾರೆ ಇದರಲ್ಲಿ ತಮ್ಮ ಪತ್ನಿ ರಾತ್ರಿ ಮಲಗಿದರೆ ಮರು ದಿನ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡುತ್ತಾಳೆ.ಮತ್ತೆ ಸಂಜೆ 5-30ಕ್ಕೆ ಮಲಗಿದರೆ ರಾತ್ರಿ 9-30 ಕ್ಕೆ ಏಳುತ್ತಾರೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಮಾಡುತ್ತಿದ್ದಾರೆ. ಈಕೆಯ ನಿದ್ರೆಯ ಕಾಟದಿಂದ ನಾನು ತತ್ತರಿಸಿ ಹೋಗಿದ್ದು ಇದರಿಂದ ನನಗೆ ಮುಕ್ತಿ ಕೊಡಿಸಿ ಎಂದು ತಿಳಿಸಿದ್ದಾರೆ.
ನನ್ನ ಪತ್ನಿಯಾದ ಆಯೇಷಾ ಫರ್ಹಿನ್ ಯಾವುದೇ ರೀತಿಯ ಮನೆ ಕೆಲಸ ಮಾಡುವುದಿಲ್ಲ. ಅಡುಗೆ ಕೂಡ ಮಾಡುವುದಿಲ್ಲ ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು.ಇಷ್ಟು ದಿನದವರೆಗೂ ಹೇಗೋ ಸಹಿಸಿಕೊಂಡಿದ್ದೆ,ಆದರೆ ಈಗ ನಿದ್ರೆಯ ಬಗ್ಗೆ ಪ್ರಶ್ನಿಸಿದೆ.ಇದರಿಂದ ಆಕ್ರೋಶಗೊಂಡ ಆಕೆ ತನ್ನ ತವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.ನಾನು ನನ್ನ ಪತ್ನಿಯಿಂದ ಹಾಗೂ ಆಕೆಯ ಕುಟುಂಬದವರಿಂದ ನರಕಯಾತನೆ ಅನುಭವಿಸಯತ್ತಿದ್ದೇನೆ.ಹೀಗಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಆಕೆಗೆ ಮದುವೆಗೆ ಮುಂಚೆಯೇ ಖಾಯಿಲೆಗಳಿದೆ. ಅದನ್ನ ಮರೆ ಮಾಚಿ ಐದು ವರ್ಷದ ಹಿಂದೆ ನನಗೆ ಆಕೆಯನ್ನು ನನಗೆ ಮದುವೆ ಮಾಡಿಸಿದ್ದಾರೆಂದು ದೂರಿನಲ್ಲಿ ಕಮ್ರಾನ್ ಖಾನ್ ಹೇಳಿದ್ದಾರೆ.
ಇತ್ತೀಚೆಗೆ ನನ್ನ ಪತ್ನಿ ಆಕೆಯನಹುಟ್ಟುಹಬ್ಬದ ನೆಪದಲ್ಲಿ 20-25 ಜನರನ್ನು ಮನೆಗೆ ಆಹ್ವಾನಿಸಿ ಜಗಳ ತೆಗೆದು ಅದೇ ನೆಪದಲ್ಲಿ ಹಲ್ಲೆ ನಡೆಸಿರುವುದಾಗಿ ಪತಿ ಕಮ್ರಾನ್ ಆರೋಪಿಸಿದ್ದಾರೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ತನ್ನ ಜೊತೆ ಜಗಳವಾಡಿ 15-20 ದಿನ ತವರು ಮನೆಗೆ ಸೇರಿಕೊಳ್ಳುತ್ತಾಳೆ. ತನ್ನ ಬಗ್ಗೆ ಕಿಂಚಿತ್ತೂ ಪ್ರೀತಿ , ಮಮಕಾರ ಇಲ್ಲ, ತನ್ನ ಆಸ್ತಿ ಲಪಟಾಯಿಸಲು, ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಕಮ್ರಾನ್ ಖಾನ್ ದೂರಿದ್ದಾರೆ.