ಬೆಂಗಳೂರು, ಜೂ. 1-
ಇಂಧನ ಇಲಾಖೆಯ ನೂತನ ಸಚಿವರಾಗಿ ಕಾರ್ಯಾರಂಭ ಮಾಡಿರುವ ಕೆಜೆ ಜಾರ್ಜ್ ಇಲಾಖೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ ಈ ನಿಟ್ಟಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬೆಸ್ಕಾಂನ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಸಾಣೆ ಹಿಡಿಯಲು ತೀರ್ಮಾನಿಸಿದ್ದಾರೆ.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಕೆಜೆ ಜಾರ್ಜ್ ಅವರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡರು ಆನಂತರ ನಿವೃತ್ತ ಅಧಿಕಾರಿಗಳು ಇಂಧನ ದಕ್ಷತೆಯುಳ್ಳ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿ ಇಲಾಖೆಗೆ ಹೊಸ ರೂಪ ನೀಡುವ ಕುರಿತಂತೆ ಮಾಹಿತಿ ಪಡೆದುಕೊಂಡರು.
ಈ ಎಲ್ಲಾ ಮಾಹಿತಿಗಳ ಆಧಾರದಲ್ಲಿ ಇಂದು ದಿಡೀರ್ ಬೆಸ್ಕಾಂ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಕಚೇರಿಯ ಎಲ್ಲಾ ವಿಭಾಗಗಳಿಗೆ ತೆರಳಿ ಸಿಬ್ಬಂದಿಯ ಹಾಜರಾತಿ ಕಾರ್ಯಕ್ಷಮತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅನಧಿಕೃತ ಗೈರು ಹಾಜರಾದವರಿಗೆ ಎಚ್ಚರಿಕೆ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಮಂತ್ರಿಯಾದ ನಂತರ ಕಚೇರಿಗೆ ಇದು ತಮ್ಮ ಮೊದಲ ಭೇಟಿಯಾಗಿದೆ ಹೀಗಾಗಿ ಯಾರ ಬಗ್ಗೆಯೂ ಕಠೋರವಾಗಿ ಮಾತನಾಡುವುದಿಲ್ಲ ಇನ್ನು ಮುಂದೆ ಇಂತಹ ದಿಡೀರ್ ಭೇಟಿ ಹೆಚ್ಚಳವಾಗಲಿದೆ ಕಚೇರಿಯ ಸಿಬ್ಬಂದಿ ತಮ್ಮ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳಬೇಕು. ಕೆಲಸದ ಅವಧಿಯಲ್ಲಿ ತಮ್ಮ ಸ್ಥಳ ಬಿಟ್ಟು ಬೇರೆ ಕಡೆ ಹೋಗಬಾರದು ಅನಧಿಕೃತ ಗೈರು ಹಾಜರಿಯನ್ನು ಆಶಿಸ್ತು ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಾಂತ್ರಿಕ ವಿಭಾಗದ ನಿರ್ದೇಶಕ ಆಡಳಿತ ವಿಭಾಗದ ನಿರ್ದೇಶಕ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಈ ವೇಳೆ ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಗ್ರಾಹಕರ ಸಂಖ್ಯೆ ವಿದ್ಯುತ್ ಬಳಕೆಯ ಪ್ರಮಾಣ ಬಿಲ್ ಪಾವತಿಯ ವೈಖರಿ ಸೇರಿದಂತೆ ಹಲವು ಮಾಹಿತಿಗಳನ್ನು ಕೇಳಿದರು ಈ ಪ್ರಶ್ನೆಗಳಿಗೆ ಉತ್ತರ ಹೇಳಲು ಉನ್ನತ ಅಧಿಕಾರಿಗಳು ತಡಬಡಾಯಿಸಿದಾಗ ಅವರನ್ನು ಲಘುವಾಗಿ ತರಾಟೆಗೆ ತೆಗೆದುಕೊಂಡ ಸಚಿವ ಜಾರ್ಜ್ ತಾವು ಉನ್ನತ ಅಧಿಕಾರಿ ತಮ್ಮ ಬಳಿ ಎಲ್ಲ ಮಾಹಿತಿ ಇರಬೇಕು ಇದು ನನ್ನ ಮೊದಲ ಭೇಟಿ ಇನ್ನು ಮುಂದೆ ಇಂತಹ ಆಲಕ್ಷ್ಯ ಧೋರಣೆಯನ್ನು ಸಹಿಸುವುದಿಲ್ಲ ನಾನು ಕೇಳಿದಾಗ ನೀವು ಎಲ್ಲ ಮಾಹಿತಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.
ಇದಾದ ಬಳಿಕ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡರು.
ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್ ಬಳಕೆದಾರರು ಪ್ರತಿ ತಿಂಗಳು ಸರಾಸರಿ 53 ಯೂನಿಟ್ ಮಾತ್ರ ಉಪಯೋಗಿಸುತ್ತಿದ್ದಾರೆ. ಹೆಚ್ಚುವರಿ 147 ಯುನಿಟ್ ಅನ್ನ ಘೋಷಣೆ ಮಾಡಿದರೆ ಅದರ ಬಳಕೆ ಸ್ವರೂಪದ ಬಗ್ಗೆಯೂ ಚರ್ಚಿಸಬೇಕಿದೆ. ಮನೆ ಮಾಲೀಕರು ಹೆಚ್ಚವರಿ ಎಲೆಕ್ಟ್ರಾನಿಕ್ ಉಪಕರಣ ಬಳಸಿದರೇ ಶೇಕಡ 15 ರಿಂದ 20ರಷ್ಟು ಹೆಚ್ಚು ಬಳಕೆ ಮಾಡಬಹುದು. ಹೀಗಾಗಿ 200 ಯೂನಿಟ್ ಬಳಕೆ ವಿಚಾರಕ್ಕೆ ಅರ್ಜಿ ಆಹ್ವಾನ ಹಾಗೂ ಬಿಲ್ ಕಟ್ಟುವ ಮಾದರಿ ಜಾರಿಗೆ ತರಬಹುದು. ಈಗಾಗಲೇ ಇರುವ ದೆಹಲಿ ಮಾಡಲ್ ನಂತೆ ಕಾರ್ಯನಿರ್ವಹಿಸುವುದು ಸಹ ಒಂದು ಆಯ್ಕೆಯಾಗಿ ಪರಿಗಣಿಸಬಹುದು. ವಿದ್ಯುತ್ ಸಬ್ಸಿಡಿ ಬೇಡ ಎಂದು ಸ್ವಯಂ ಪ್ರೇರಿತವಾಗಿ ಕೈ ಬಿಡುವವರನ್ನ ಸಹ ಗುರುತಿಸಬಹುದು. ಈ ರೀತಿ ಸಬ್ಸಿಡಿ ನಿರಾಕರಿಸುವವರು ರಾಜ್ಯದಲ್ಲಿ ಅಂದಾಜು 5 ಲಕ್ಷ ಮಂದಿ ಎಂದು ಗುರುತಿಸಬಹುದಾಗಿದೆ ಎಂದು ಅಧಿಕಾರಿಗಳು ಸುದೀರ್ಘ ವಿವರಣೆ ನೀಡಿದರು