ಬೆಂಗಳೂರು –
ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಸೇವಾ ಮನೋಭಾವ ಪ್ರಶ್ನಿಸುವ ಗುಣ ಧರ್ಮ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮಹತ್ವದ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸಮೂಹ ಶಕ್ತಿ ಸಂಘಟನೆ ಇದೀಗ ಮತ್ತೊಂದು ಮಹತ್ವದ ನಿರ್ಣಯದ ಮೂಲಕ ಜನರ ಮುಂದೆ ಬರಲು ಸಜ್ಜಾಗಿದೆ
ಸದ್ಯದಲ್ಲೇ ಮಹಾನಗರ ಪಾಲಿಕೆ ಚುನಾವಣೆ ಎದುರಿಸುತ್ತಿರುವ ಬೆಂಗಳೂರಿನಲ್ಲಿ ರಾಜಕೀಯ ಪ್ರಜ್ಞೆ ಮತ್ತು ಸಂವಿಧಾನದ ಮೂಲ ಆಶಯಗಳ ಬಗ್ಗೆ ಅರಿವು ಮೂಡಿಸುವ ವಿಶೇಷ ಆಂದೋಲನ ಕೈಗೊಳ್ಳುವ ಸಂಕಲ್ಪ ಮಾಡಲಾಗಿದೆ.
ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಸಮೂಹ ಶಕ್ತಿ ಸಂಘಟನೆಯ ಕೋರ್ ಕಮಿಟಿ ಸಭೆ ಬೆಂಗಳೂರಿನಲ್ಲಿ ನಡೆಯಿತು ಸಂಘಟನೆಗೆ ಹೊಸದಾಗಿ ಸೇರ್ಪಡೆಯಾದ ಕೆಲವು ಸದಸ್ಯರು ಹಾಗೂ ಸಂಘದ ಅಧ್ಯಕ್ಷ ವಿನಾಯಕ್ ರಾಮಕೃಷ್ಣ ಮಹಾ ಪ್ರಧಾನ ಕಾರ್ಯದರ್ಶಿ ಪಿ ಎಚ್ ದೇವರಾಜ್ ಪ್ರಧಾನ ಕಾರ್ಯದರ್ಶಿ ಕೆ ರವಿ ಮತ್ತು ಖಜಾಂಚಿ ಬೋಪಣ್ಣ ಅವರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಸಂಘಟನೆಯ ಸಂಸ್ಥಾಪಕ ಮುಖ್ಯ ಸಲಹೆಗಾರ ದೀಪಕ್ ತಿಮ್ಮಯ ಪಾಲ್ಗೊಂಡು ಮಾರ್ಗದರ್ಶನ ಮಾಡಿದರು.
ಸಮೂಹ ಸಂಘಟನೆಯ ಉದ್ದೇಶ ಜನಸಾಮಾನ್ಯರಲ್ಲಿ ಈ ಸಂಘಟನೆ ಬೆಳೆಸಬೇಕಾಗಿರುವ ವೈಚಾರಿಕ ಮನೋಭಾವ ರಾಜಕೀಯ ಪ್ರಜ್ಞೆ ಸಂವಿಧಾನದ ಬಗೆಗಿನ ಅರಿವು ಇವುಗಳ ಜೊತೆಗೆ ಅನ್ಯಾಯ ನಡೆದಾಗ ಅದನ್ನು ಪ್ರಶ್ನಿಸಿ ಸಂತ್ರಸ್ತರಾದವರಿಗೆ ನೆರವು ನೀಡುವಲ್ಲಿ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸಲಹೆ ನೀಡಿದರು.
ಸಮೂಹ ಶಕ್ತಿ ಈಗಾಗಲೇ ಇರುವ ಹಲವು ಸಂಘಟನೆಗಳಲ್ಲಿ ಒಂದು ಸಂಘಟನೆಯಂತೆ ಇರಬಾರದು ಇದು ಇತರ ಎಲ್ಲ ಸಂಘಟನೆಗಳಿಗಿಂತ ಭಿನ್ನ ಆಲೋಚನೆ ವಿಭಿನ್ನ ದೃಷ್ಟಿಕೋನ ಹೊಂದಿರಬೇಕು ಸಂಘಟನೆಯ ಸದಸ್ಯರಲ್ಲಿ ಸಮಾಜ ಸೇವೆಯ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಬೇಕು ಎಂದು ಹೇಳಿದರು
ರಾಜ್ಯದ ಕೆಲವು ಗ್ರಾಮೀಣ ಪ್ರದೇಶದಲ್ಲಿ ಸಕ್ರಿಯವಾಗಿರುವ ಈ ಸಂಘಟನೆ ಮಹಾನಗರ ಬೆಂಗಳೂರಿನಲ್ಲಿ ಸಕ್ರಿಯವಾಗಬೇಕು ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವೇಳೆ ಜನರ ನಡುವೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವ ಕಾರ್ಯ ಸೂಚಿಯನ್ನು ಅಳವಡಿಸಿಕೊಳ್ಳಲಾಯಿತು.
ರಾಜ್ಯದ ಇತರೆ ಭಾಗಗಳಲ್ಲಿ ಸಂಘಟನೆಯ ಚಟುವಟಿಕೆಗಳನ್ನ ಮತ್ತಷ್ಟು ಚುರುಕುಗೊಳಿಸುವ ದೃಷ್ಟಿಯಿಂದ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಲು ಮುಂದಿನ ಸಭೆಯನ್ನು ಚಿತ್ರದುರ್ಗದಲ್ಲಿ ನಡೆಸಲು ತೀರ್ಮಾನಿಸಲಾಯಿತು