ಬೆಂಗಳೂರು,ಜೂ.4- ಭಾರತೀಯ ಕ್ರಿಕೆಟ್ ತಂಡದ ಸ್ಟೈಲಿಷ್ ಆಟಗಾರ ಕಿಂಗ್ ಕೊಹ್ಲಿ ಜಗತ್ತಿನಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ.ಎದುರಾಳಿ ತಂಡ ನೀಡಿದ ಗುರಿ ಬೆನ್ನಟ್ಟಿ ತನ್ನ ತಂಡವನ್ನು ಗೆಲುವಿನ ದಡ ಸೇರಿಸುವ ಸವಾಲಿನ ಆಟಕ್ಕೆ ಕೊಹ್ಲಿ ಹೆಸರುವಾಸಿ.ಹೀಗಾಗಿ ಕೊಹ್ಲಿ ಕ್ರೀಸ್ ನಲ್ಲಿದ್ದರೆ ಎದುರಾಳಿ ತಂಡ ಯಾವುದೇ ಗುರಿ ನೀಡಿದ್ದರೂ ಅದನ್ನು ಭೇದಿಸುವುದು ಖಚಿತ ಎಂಬ ಅಭಿಪ್ರಾಯವಿದೆ.
ಇಂತಹ ಕಿಂಗ್ ಕೊಹ್ಲಿ ಬೆಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣವೊಂದನ್ನು ಭೇದಿಸಿದ್ದಾರೆ.ಅದು ಹೀಗೆಂದು ಗೊತ್ತಾಗಬೇಕಾದರೆ ಈ ಸ್ಟೋರಿ ನೋಡಿ.
ಮಹಾಲಕ್ಷ್ಮಿಪುರಂನಲ್ಲಿ ನಡೆದಿದ್ದ 82 ವರ್ಷದ ವೃದ್ಧೆಯ ಕೊಲೆಯಾಗಿತ್ತು.ಹಂತಕರು ಯಾವುದೇ ಸುಳಿವು ಬಿಡದೆ ಪರಾರಿಯಾಗಿದ್ದರು.ಈ ಪ್ರಕರಣ ಕಿಂಗ್ ಕೊಹ್ಲಿಯಿಂದ ಪತ್ತೆಯಾಗಿದೆ.
ಮಹಾಲಕ್ಷ್ಮಿಪುರಂ ಕಮಲಾ ಎನ್ ರಾವ್ (ಕಮಲಮ್ಮ) ಅವರನ್ನು ಮೇ 27 ರಂದು ಹತ್ಯೆ ಮಾಡಲಾತ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ದೇಹವನ್ನು ಪರಿಶೀಲನೆ ಮಾಡಿದ್ದರು ಈ ವೇಳೆ ಕಮಲಮ್ಮ ಅವರ ಕೈ ಮತ್ತು ಕಾಲುಗಳನ್ನು ಕಟ್ಟಿ ಮತ್ತು ಬಾಯಿಯನ್ನು ಟೇಪ್‌ನಿಂದ ಮುಚ್ಚಲಾಗಿತ್ತು.
ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡು ಹತ್ಯೆ ಆರೋಪಿಗಳಾದ ಲಗ್ಗೆರೆಯ ಸಿದ್ದರಾಜು ಸಿ.ಎಂ (34) ಮತ್ತು ಪ್ಲಂಬರ್ ಆರ್.ಅಶೋಕ್ (40) ಮತ್ತು ಕಾಮಾಕ್ಷಿಪಾಳ್ಯದ ಸಿ.ಅಂಜನಮೂರ್ತಿ (33)ನನ್ನು ಬಂಧಿಸಲಾಗಿದೆ.
ಈ ಹತ್ಯೆ ನಡದ ರೀತಿ ಹಾಗೂ ಅದನ್ನು ಪತ್ತೆ ಹಚ್ಚಿದ ಪೊಲೀಸರ ತನಿಖಾ ವೈಖರಿ ತುಂಬಾ ಕುತೂಹಲಕಾರಿ ಸಂಗತಿಯಾಗಿದೆ.
ಹತ್ಯೆ ಆರೋಪಿ ಅಶೋಕ್, ಕಮಲಾ ಅವರ ಮನೆಗೆ ಪ್ಲಂಬಿಂಗ್ ಕೆಲಸಕ್ಕಾಗಿ ಭೇಟಿ ನೀಡಿದ್ದ. ಈ ವೇಳೆ ಕಮಲಮ್ಮ ಅವರ ಪತಿ ಕಳೆದ ಅಕ್ಟೋಬರ್‌ನಲ್ಲಿ ನಿಧನರಾಗಿರುವುದನ್ನೂ ತಿಳಿದುಕೊಂಡ.ಇದರಿಂದ ಆಕೆಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನು ಗಮನಿಸಿದ ಆತ, ಅವರ ಬಳಿ ಸಾಕಷ್ಟು ಹಣವಿರುವ ಬಗ್ಗೆ ಮಾಹಿತಿ ಪಡೆದಿದ್ದ.
ಈ ವಿಚಾರವನ್ನು ಕೆಲ ದಿನಗಳ ಹಿಂದೆ ಬಾರ್‌ನಲ್ಲಿ ತನ್ನ ಸಹಚರರಿಗೆ ಬಹಿರಂಗಪಡಿಸಿದ್ದಾನೆ. ಆಗ ಆತನ ಸಹಚರ ಸಿದ್ದರಾಜು ತನ್ನ ಸಾಲ ತೀರಿಸಲು ಕಮಲಮ್ಮ ಅವರ ಚಿನ್ನಾಭರಣಗಳನ್ನು ದೋಚಲು ದುಷ್ಟ ಸಲಹೆಯನ್ನು ನೀಡುತ್ತಾನೆ. ಅದರಂತೆ ಆರೋಪಿಗಳು ಸಂಚು ರೂಪಿಸುತ್ತಾರೆ.ಮೇ 27ರಂದು ಬೆಳಗ್ಗೆ ಆರೋಪಿಗಳು ಅಂಜನಮೂರ್ತಿ ಅವರ ಆಟೋರಿಕ್ಷಾದ ನಂಬರ್ ಪ್ಲೇಟ್ ತೆಗೆದು ಹಿಂಭಾಗದಲ್ಲಿ ‘ಕಿಂಗ್ ಕೊಹ್ಲಿ’ ಎಂದು ಬರೆದು ಸ್ಥಳ ಬಾಡಿಗೆಗೆ ಕೇಳುವ ನೆಪದಲ್ಲಿ ಕಮಲಮ್ಮ ಅವರ ಮನೆಗೆ ನುಗ್ಗಿದ್ದಾರೆ.
ಹೀಗೆ ನುಗ್ಗಿದ ಆರೋಪಿಗಳು ಕಮಲಮ್ಮ ಅವರ ಕೈ ಕಾಲುಗಳನ್ನು ಕಟ್ಟಿ, ಆಕೆಯ ಬಾಯಿಯನ್ನು ಟೇಪ್‌ನಿಂದ ಮುಚ್ಚಿ ಕೊಂದಿದ್ದಾರೆ. ಕೃತ್ಯದ ವೇಳೆ ಅಶೋಕ್, ಕಮಲಮ್ಮ ಅವರ ನಿವಾಸದ ಹೊರಗೆ ಕಾಯಲು ನಿಂತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳ ಚಲನವಲನ ಸೆರೆಯಾಗಿರುವುದು ಕಂಡುಬಂದಿದೆ. ಅದರಂತೆ ತನಿಖಾಧಿಕಾರಿಗಳು ಆರೋಪಿಗಳ ಜಾಡು ಹಿಡಿದಿದ್ದಾರೆ. ನಾವು ಕಮಲಾ ಅವರ ನಿವಾಸದ ಬಳಿ ದೃಶ್ಯಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಬೆಳಿಗ್ಗೆ ಅದೇ ರಸ್ತೆಯಲ್ಲಿ ಆಟೋರಿಕ್ಷಾ ಹಲವಾರು ಸುತ್ತುಗಳನ್ನು ಮಾಡುವುದನ್ನು ಗಮನಿಸಿದ್ದೇವೆ. ಆಟೊರಿಕ್ಷಾದಲ್ಲಿ ಕಿಂಗ್ ಕೊಹ್ಲಿ ಎಂಬ ಪದವಿತ್ತು ಆದರೆ ನೋಂದಣಿ ಸಂಖ್ಯೆ ಇರಲಿಲ್ಲ
ನಾವು ಆ ದಿನ ಬೆಳಿಗ್ಗೆ ಆಟೋದ ಚಲನವಲನಗಳನ್ನು ಗಮನಿಸಿದೆವು ಮತ್ತು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಂಜನಮೂರ್ತಿ ವಾಹನದ ನಂಬರ್ ಪ್ಲೇಟ್ ತೆಗೆದುಹಾಕುವುದು ಸೆರೆಯಾಗಿದೆ. ಹೀಗಾಗಿ ನಾವು ಆಟೋರಿಕ್ಷಾದ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿದೆವು. ಅದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು. ‘ಕಿಂಗ್ ಕೊಹ್ಲಿ’ ಎಂಬ ಪದಗಳು ನಮಗೆ ವಾಹನವನ್ನು ಗುರುತಿಸಲು ಸಹಾಯ ಮಾಡಿದೆ.ಈ ಮೂಲಕ ಸವಾಲಾಗಬಹುದಾಗಿದ್ದ ಹತ್ಯೆ ಪ್ರಕರಣ ಸುಲಭವಾಗಿ ಪತ್ತೆಯಾಗಿದೆ ಎಂದು ತಿಳಿಸಿದರು.