ಬೆಂಗಳೂರು: ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅವ್ಯವಸ್ಥೆಯ ಆಗರವಾಗಿದ್ದು,ಇದಕ್ಕೆ ಲಂಗು ಲಗಾಮಿಲ್ಲದಂತಾಗಿದೆ.
ಈ ಯೋಜನೆಯಡಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ರೀತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಇಟಿಎಂ ಯಂತ್ರದ ಮೂಲಕ ಶೂನ್ಯ ಟಿಕೆಟ್ ವಿತರಿಸಲಾಗುತ್ತಿದೆ.
ಯೋಜನೆ ಜಾರಿಗೆ ಬಂದ ಆರಂಭದ 20 ದಿನಗಳ ಅವಧಿಯಲ್ಲಿ ನಾಲ್ಕೂ ನಿಗಮಗಳಲ್ಲಿ ಇದಕ್ಕೆ ಆಗಿರುವ ವಾಸ್ತವಿಕ ವೆಚ್ಚ 250.96 ಕೋಟಿ ರೂಪಾಯಿ. ಇಷ್ಟೂ ಮೊತ್ತವನ್ನು ಬಿಡುಗಡೆ ಮಾಡುವಂತೆ ಸಾರಿಗೆ ನಿಗಮಗಳು ಬೇಡಿಕೆ ಸಲ್ಲಿಸಿವೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ತಕ್ಷಣವೇ ಈ ಹಣ ಬಿಡುಗಡೆ ಮಾಡಬೇಕು,ಇಲ್ಲವಾದರೆ ನಿಗಮಗಳು ಅಪಾರ ನಷ್ಟ ಹೊಂದಲಿವೆ ಎಂದು ಮನವಿಯಲ್ಲಿ
ತಿಳಿಸಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಸರ್ಕಾರ, ಈ ಯೋಜನೆಗಾಗಿ ಅಂದಾಜು ಮಾಡಿ ವಾರ್ಷಿಕವಾಗಿ ನಿಗಧಿ ಪಡಿಸಿರುವ ಸಹಾಯಧನ 1,998 ಕೋಟಿ ರೂಪಾಯಿಯಲ್ಲಿ ₹125.47 ಕೋಟಿ ರೂಪಾಯಿ ಭರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತಕರಾರು:
ಸರ್ಕಾರದ ಈ ಆದೇಶಕ್ಕೆ ಇದೀಗ ಆರ್ಥಿಕ ಇಲಾಖೆ ತಕರಾರು ಸಲ್ಲಿಸಿದೆ.ಹಣ ಬಿಡುಗಡೆಗೆ ಇಲಾಖೆ ಕೆಲವು ನಿಯಮ ರೂಪಿಸಿದೆ.ಈ ನಿಯಮಗಳು ಎಲ್ಲಾ ಇಲಾಖೆಗಳಿಗೂ ಅನ್ವಯಿಸುತ್ತವೆ.ನಿಯಮ ಮೀರಿ ಯಾವುದೇ ಇಲಾಖೆಗೆ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಶಕ್ತಿ ಯೋಜನೆಗೆ ಹಣ ಬಿಡುಗಡೆಗೆ ಯಾವುದೇ ಅಡ್ಡಿಯಿಲ್ಲ.ಆದರೆ,ನಿಗಮಗಳು ಈ ಯೋಜನೆ ಅನ್ವಯ ಎಷ್ಟು ಮಂದಿ ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ ಎಂಬ ಖಚಿತ ವಿವರ ನೀಡಬೇಕು.ಪ್ರತಿ ಬಸ್ಸಿನಲ್ಲಿ ಶೇಕಡಾ ಐವತ್ತು ಸೀಟುಗಳು ಶಕ್ತಿ ಯೋಜನೆಗೆ ಮೀಸಲು ಎಂದರೂ ಕೂಡಾ ಪ್ರತಿ ಬಸ್ ಎಲ್ಲಿಂದ ಆರಂಭವಾಗಿ ಎಲ್ಲಿಯವರೆಗೆ ಚಲಿಸುತ್ತದೆ, ಎಷ್ಟು ದೂರ,ಪ್ರತಿ ಕಿಲೋಮೀಟರ್ ಗೆ ಎಷ್ಟು ವೆಚ್ಚವಾಗಲಿದೆ ಎಂಬ ವಿವರ ನೀಡುವಂತೆ ಕೇಳಲಾಗಿದೆ.
ಯೋಜನೆಯ ಫಲಾನುಭವಿ ಯಾವ ಸ್ಥಳದಲ್ಲಿ ಬಸ್ಸು ಹತ್ತಿ ಎಲ್ಲಿ ಇಳಿಯುತ್ತಾರೋ ಆ ಹಂತದವರೆಗೆ ಹಣ ನೀಡಬಹುದು ಅದಕ್ಕೆ ವಿವರ ನೀಡಬೇಕು.ಅದನ್ನು ಬಿಟ್ಟು ಪ್ರತಿಯೊಂದು ಬಸ್ಸಿನ ಶೇಕಡಾ ಐವತ್ತರಷ್ಟು ಹಣ ನೀಡಬೇಕು ಎಂಬುದು ಸಮರ್ಥನೀಯವಲ್ಲ ಎಂದು ಆರ್ಥಿಕ ಇಲಾಖೆ ವರದಿ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಪ್ರತಿಯೊಂದು ನಿಗಮದಲ್ಲಿ ಎಷ್ಟು ಬಸ್ಸುಗಳು ಪ್ರತಿ ನಿತ್ಯ ಸಂಚರಿಸುತ್ತಿವೆ.ಅವುಗಳ ಆರಂಭಿಕ ಸ್ಥಳ ಹಾಗೂ ಅಂತ್ಯದ ವಿವರ ಬೇಕು.ಕಡಿಮೆ ದೂರವಾದರೆ,ದಿನದಲ್ಲಿ ಎಷ್ಟು ಬಾರಿ ಸಂಚರಿಸುತ್ತವೆ, ಕ್ರಮಿಸಿದ ದೂರ,ಸಂಚರಿಸಿದ ಪ್ರಯಾಣಿಕರ ವಿವರ ಸಂಗ್ರಹಿಸಿ ಪ್ರತಿ ಬಸ್ಸಿಗೆ ಇಷ್ಟು ಮೊತ್ತ ಎಂಬ ವಿವರ ನೀಡಬೇಕು ಆಗ ಮಾತ್ರವೇ ಅದನ್ನು ಭರಿಸಬಹುದು ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.
ಯೋಜನೆ ಜಾರಿಯಾಗಿ ಇಷ್ಟು ದಿನಗಳು ಕಳೆದರೂ ಇಲ್ಲಿಯವರೆಗೆ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿಲ್ಲ.ಹೀಗಾಗಿ ಅವರ ಪ್ರಯಾಣದ ವಿವರ ಲಭ್ಯವಾಗುತ್ತಿಲ್ಲ ಎನ್ನುವುದೂ ಸೇರಿದಂತೆ ಕೆಲವು ಮೂಲಭೂತ ವಿವರ ನೀಡಿದರೆ ಹಣ ಬಿಡುಗಡೆ ಸುಲಭವಾಗಲಿದೆ.ಜೊತೆಗೆ,ಯೋಜನೆಯೂ ಸಾರ್ಥಕತೆ ಪಡೆಯಲಿದೆ.ಇಲ್ಲವಾದರೆ ಇದಕ್ಕೆ ಲಂಗು ಲಗಾಮಿಲ್ಲದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವುದಾಗಿ ತಿಳಿದು ಬಂದಿದೆ.