ಬೆಂಗಳೂರು, ಆ.11- ಸರ್ಕಾರದ ವಿವಿಧ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಬಾಕಿ ಪಾವತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ (DK Shivakumar) ಗುತ್ತಿಗೆದಾರರ ಬಿಲ್ ಪಾವತಿಸಲು ಕಮೀಷನ್ ಕೇಳಿದ್ದೇನೆಂದು ಯಾರಾದರೂ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ.
ಗುತ್ತಿಗೆದಾರರಿಂದ ಬಿಲ್ ಬಾಕಿ ಪಾವತಿಸಲು ಶೇ.10ರಿಂದ 15ರಷ್ಟು ಕಮೀಷನ್‍ನ್ನು ಯಾರು ಕೇಳಿದ್ದರು ಎಂಬುದನ್ನು ಸಾಬೀತುಪಡಿಸಲಿ. ಮೊದಲು ಜೆಡಿಎಸ್ ನ ಕುಮಾರಸ್ವಾಮಿ ಇಂತಹ ಆರೋಪ ಮಾಡಿದ್ದರು ಈಗ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ,ಇದಕ್ಕೆ ಪುರಾವೆ ಬೇಕಲ್ಲ ಎಂದರು.
ಯಾರು ಕಮಿಷನ್ ಕೇಳಿದ್ದಾರೆಂದು ಹೇಳಲಿ,ಒಂದು ವೇಳೆ ನಾನು ಪಡೆದಿದ್ದೇನೆಂದು ಸಾಬೀತಾದರೆ ಇವತ್ತೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಇಂತಹ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ , ಆರ್.ಅಶೋಕ್ ನಿವೃತ್ತರಾಗಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆರ್.ಅಶೋಕ್ ಅವರು ಸಚಿವರಾಗಿದ್ದಾಗ ಕಾಮಗಾರಿಯ ಬಾಕಿ ಬಿಲ್‍ಗಳನ್ನು ಏಕೆ ಪಾವತಿ ಮಾಡಲಿಲ್ಲ? ಬಿಲ್ ಪಾವತಿಗೆ ಹಣ ಇರಲಿಲ್ಲವೇ? ಕೆಲಸ ಸರಿಯಾಗಿ ಆಗಿರಲಿಲ್ಲವೇ? ಯಾವ ಕಾರಣಕ್ಕೆ ಬಿಲ್ ಬಾಕಿ ಉಳಿಸಿಕೊಳ್ಳಲಾಗಿತ್ತು ಎಂಬುದನ್ನು ಮೊದಲು ಅವರಿಬ್ಬರು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾತನಾಡುವುದಕ್ಕೆ ನನ್ನ ಆಕ್ಷೇಪವಿಲ್ಲ. ಅಶೋಕ್ ಅವರ ಮಾತುಗಳನ್ನು ಕೇಳಿದ್ದೇನೆ. ತುಂಬ ಮಾತನಾಡಿದ್ದಾರೆ. ಕನಕಪುರ ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಜನ ನನ್ನನ್ನು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ನನಗೆ ನನ್ನದೇ ಆದಂತಹ ವ್ಯಕ್ತಿತ್ವವಿದೆ ಎಂದು ತಿರುಗೇಟು ನೀಡಿದರು.
ಕಾಮಗಾರಿಗಳ ನೈಜ್ಯತೆ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಈ ಹಿಂದೆ ಕೆಂಪಣ್ಣ ಅವರು ದೂರು ನೀಡಿದ್ದರು. ಬಿಜೆಪಿಯ ಕೆಲ ಶಾಸಕರು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಅವುಗಳನ್ನು ಪರಿಶೀಲಿಸಲು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
ಕಾಮಗಾರಿಗಳು ನಡೆದಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವಂತೆ ತನಿಖಾ ಸಮಿತಿಗೆ ಸೂಚಿಸಿದ್ದೇವೆ. ನೈಜ್ಯತೆ ಪರಿಶೀಲನೆಗೆ 15-20 ದಿನಗಳಾದರೂ ಕಾಲಾವಕಾಶ ಬೇಡವೇ? ಕಳೆದ ನಾಲ್ಕೈದು ವರ್ಷಗಳಿಂದಲೂ ಬಿಲ್ ಪಡೆಯದೇ ಇದ್ದವರಿಗೆ ಈಗ ಇದ್ದಕ್ಕಿದ್ದಂತೆ ಇಷ್ಟು ಆತುರವೇಕೆ? ಎಂದು ಪ್ರಶ್ನಿಸಿದರು.
ಬಾಕಿ ಬಿಡುಗಡೆ ಮಾಡಿ:
ಈ ಬೆಳವಣಿಗೆಗಳ ನಡುವೆ ಸುದ್ದಿಗೋಷ್ಠಿ ನಡೆಸಿದ ಗುತ್ತಿಗೆದಾರರ ಸಂಘದ ಮುಖಂಡ,ನಾವು ಈ ಸರ್ಕಾರದ ಯಾರ ವಿರುದ್ಧವೂ ಕಮೀಷನ್ ಆರೋಪ ಮಾಡಿಲ್ಲ ಬದಲಿಗೆ ತಕ್ಷಣವೇ ಬಾಕಿ ಬಿಲ್ ಪಾವತಿಸಲು ಮನವಿ ಮಾಡಿದ್ದೇವೆ ಎಂದು ಹೇಳಿದರು. ಬಾಕಿ ಬಿಲ್ ಪಾವತಿಯಾಗದೆ ಇರುವ ಹಿನ್ನಲೆಯಲ್ಲಿ ಹಲವು ಜಿಲ್ಲೆಗಳಿಂದ ಗುತ್ತಿಗೆದಾರರು ದೂರವಾಣಿ ಕರೆ ಮಾಡಿ ತಮಗೆ ಮಾಹಿತಿ ನೀಡುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೆವು.ಎಷ್ಟು ತಿಂಗಳಿನಿಂದ ಬಿಲ್ ಬಾಕಿ ಇದೆ ಎಂದು ಕೇಳಿದರು. ಮೂರು ವರ್ಷದಿಂದ ಎಂದಾಗ, ನಮ್ಮ ಸರ್ಕಾರ ಬಂದು ಮೂರು ತಿಂಗಳಾಗಿದೆ. ಅಷ್ಟರಲ್ಲೇ ಕುತ್ತಿಗೆ ಮೇಲೆ ಕುಳಿತಿದ್ದೀರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ತಾವು ಮಾಧ್ಯಮಗಳ ಮುಂದೆ ಹೋಗುವುದಾಗಿ ವಿವರಿಸಿದ್ದೇನೆ ಎಂದರು.
ರಾಜ್ಯ ಸರ್ಕಾರದಿಂದ ಬಿಲ್ ಪಾವತಿಗೆ ಕಮೀಷನ್ ಕೇಳಲಾಗುತ್ತಿದೆ ಎಂದು ಈವರೆಗೂ ಯಾವುದೇ ಗುತ್ತಿಗೆದಾರ ತಮ್ಮ ಬಳಿ ದೂರು ನೀಡಿಲ್ಲ.ಈ ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40ರಷ್ಟು ಕಮೀಷನ್ ಬಗ್ಗೆ ಮೊದಲು ಯಡಿಯೂರಪ್ಪ ಅವರಿಗೆ ದೂರು ನೀಡಿದ್ದೆವು. ಬಳಿಕ ಪ್ರಧಾನಿಗೆ ಮನವಿ ನೀಡಲಾಗಿತ್ತು. ಅವರು ನಮ್ಮ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪರಿಸ್ಥಿತಿ ರಾಜಕೀಯವಾಗಿ ತಿರುಗಿದ ಮೇಲೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಆಹ್ವಾನ ನೀಡಿದರು. ಅದಕ್ಕಾಗಿ ಅವರನ್ನು ಭೇಟಿ ಮಾಡಿದ್ದೆವು.
ಬಿಜೆಪಿಯ ವಿಪಕ್ಷ ನಾಯಕರು ಕರೆದರೂ ಹೋಗುತ್ತೇನೆ. ಈಗ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕರಿಲ್ಲ. ಯಾರನ್ನು ಭೇಟಿ ಮಾಡಬೇಕೆಂದು ಪ್ರಶ್ನಿಸಿದರು ಬಿಬಿಎಂಪಿಯಲ್ಲಿ 2019ರಿಂದ ನಡೆದಿರುವ ಕಾಮಗಾರಿಗಳ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದು ಸರಿಯಾದ ಕ್ರಮವಲ್ಲ, ನಾಲ್ಕು ವರ್ಷಗಳ ಹಿಂದಿನ ಕಾಮಗಾರಿಯನ್ನು ಈಗ ಹೇಗೆ ತನಿಖೆ ಮಾಡಲಾಗುತ್ತದೆ. ಇದು ಸರಿಯಲ್ಲ. ಬಾಕಿ ಬಿಲ್ ಮೊತ್ತವನ್ನು ಆಗಸ್ಟ್ 31 ರೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಹೋರಾಟ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯಾದ್ಯಂತ ವಿವಿಧ ಕಾಮಗಾರಿಗಳಿಗೆ 25 ಸಾವಿರ ಕೋಟಿ ರೂ. ಬಾಕಿ ಬಿಲ್ ನೀಡಬೇಕಾಗಿದೆ. ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ದಿ ಬಗ್ಗೆ ಮಾತನಾಡುತ್ತಾರೆ. ನೀರಾವರಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಹಣ ಪಾವತಿಯಾಗಬೇಕು. ಮಂಜೂರಾದ ಕಾಮಗಾರಿಗಳಿಗಿಂತಲೂ ಕಾಯ್ದಿರಿಸಲಾದ ಹಣ ಕಡಿಮೆಯಿದೆ ಎಂದು ಹೇಳುತ್ತಾರೆ.
ಐದು ವರ್ಷದ ಎಲ್ಲಾ ಬಾಕಿ ಪಾವತಿಸಿದ ಬಳಿಕ ಹೊಸ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿಯೂ ಚರ್ಚೆಗಳಿವೆ. ನಮ್ಮ ಪರಿಸ್ಥಿತಿ ಈಗಷ್ಟೇ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿಲ್ಲ. ಹಿಂದಿನ ಸರ್ಕಾರದಲ್ಲೂ ಇದೇ ಸ್ಥಿತಿಯಲ್ಲಿದ್ದೆವು. ಹಣ ಬಿಡುಗಡೆಗಾಗಿ ಅವರ ಬಳಿಯೂ ಗೋಗರೆಗಿದ್ದೇವು ಎಂದು ಹೇಳಿದರು