ಬೆಂಗಳೂರು – ರಾಜ್ಯ ರಾಜಕಾರಣದಲ್ಲಿ ಯಾರನ್ನೂ ದ್ವೇಷಿಸದ ಮಿತಭಾಷಿ, ಸದಾ ಹಸನ್ಮುಖಿ,ಹಾಗೂ ಸೌಜನ್ಯದ ಎಲ್ಲೆಯನ್ನು ಮೀರದ ಯಾರಾದರೂ ನಾಯಕ ಇದ್ದಾರೆ ಎಂದರೆ ಅಂತವರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ರಾಮಲಿಂಗಾರೆಡ್ಡಿ (Ramalinga Reddy).ಅವರ ಈ ನಡವಳಿಕೆಯ ಕಾರಣದಿಂದಾಗಿ ಬೆಂಗಳೂರಿನಿಂದ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡಿದೆ. ಇಂತಹ ಅಪರೂಪದ ವ್ಯಕ್ತಿತ್ವದ ರಾಮಲಿಂಗಾರೆಡ್ಡಿ ಅವರು ಕೆರಳಿ ಕೆಂಡಾಮಂಡಲರಾಗುವಂತೆ ಮಾಡಿದ ವಿದ್ಯಮಾನ ನಡೆದಿದೆ.
ಅದೇನೆಂದರೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆದಾರರು ತಮ್ಮ ಬಿಲ್ ಬಾಕಿ ನೀಡಿಲ್ಲ ಎಂದು ಅಳಲು ನೋಡಿಕೊಳ್ಳುತ್ತಿದ್ದಾರೆ. ಇದನ್ನು ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು ಗುತ್ತಿಗೆದಾರರ ಬಿಲ್ ಬಾಕಿ ಪಾವತಿಸಲು ಉಪ ಮುಖ್ಯಮಂತ್ರಿ ಶಿವಕುಮಾರ್ ಕಮೀಷನ್ ಕೇಳಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ ಎಂದು ಆಗ್ರಹಿಸುತ್ತಿದ್ದಾರೆ.
ಈ ಕುರಿತಂತೆ ಬಿಜೆಪಿಯ ಹಲವು ನಾಯಕರು ಮಾಡುತ್ತಿರುವ ಸರಣಿ ಆರೋಪಗಳ ಬಗ್ಗೆ ಕೆರಳಿದ ರಾಮಲಿಂಗಾರೆಡ್ಡಿ ತಮ್ಮ ಸಹೋದ್ಯೋಗಿ ಶಿವಕುಮಾರ್ ನೆರವಿಗೆ ಧಾವಿಸಿದ್ದಾರೆ.ಅಷ್ಟೇ ಅಲ್ಲ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಮೀಷನ್ ಕುರಿತು ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎನ್ನುತ್ತಿರುವ ಬಿಜೆಪಿ ನಾಯಕರು ತಮ್ಮ ಕಾಲದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಮೊದಲು ಮನೆ ದೇವರುಗಳ ಮೇಲೆ ಆಣೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಅಜ್ಜಯ್ಯನ ಮೇಲೆ ಪ್ರಮಾಣ ಬೇಡ ಮೊದಲಿಗೆ ಅವರ ಮನೆ ದೇವರ ಮೇಲೆ ಆಣೆ ಮಾಡಿ ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನಲಿ ಆಮೇಲೆ ನಾವು ಅಜ್ಜಯ್ಯನ ಬಗ್ಗೆ ಮಾತನಾಡೋಣಾ ಎಂದಿದ್ದಾರೆ.
ಬಿಜೆಪಿಯೊಳಗೆ ಶಾಸಕ ಸಿ ಎನ್ ಅಶ್ವತ್ಥನಾರಾಯಣ ಮಾತಿಗೆ ಕಿಮ್ಮತ್ತಿಲ್ಲ. ಹೀಗಿರುವಾಗ ಉಳಿದವರು ಕಿಮ್ಮತ್ತು ಕೊಡುತ್ತಾರಾ?” ಎಂದು ಕುಟುಕಿರುವ ಅವರು ವಿರೋಧ ಪಕ್ಷದಲ್ಲಿರುವ ಎಚ್ ಡಿ ಕುಮಾರಸ್ವಾಮಿ ನಮ್ಮನ್ನು ಎಂದಾದರೂ ಹೊಗಳಲು ಸಾಧ್ಯವೇ? ಅವರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ನಮ್ಮ ಸರ್ಕಾರ ಟೇಕಾಫ್ ಆಗಿ ಸಾವಿರಾರು ಕಿಲೋಮೀಟರ್ ಮುಂದೆ ಹೋಗಿದೆ ಎಂದು ಹೇಳಿದ್ದಾರೆ