ಬೆಂಗಳೂರು: ಜಮೀನು ವಿವಾದವೊಂದರಲ್ಲಿ ದಲಿತರ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಸಿಲುಕಿರುವ ಯೋಜನಾ ಸಚಿವ ಡಿ. ಸುಧಾಕರ್ (D Sudhakar) ವಿರುದ್ಧ ಪ್ರತಿಪಕ್ಷಗಳ ಹೋರಾಟ ತೀವ್ರಗೊಂಡಿದೆ.ಪ್ರಕರಣದ ಬಗ್ಗೆ ವಿಶೇಷ ಆಸಕ್ತಿವಹಿಸಿರುವ ಬಿಜೆಪಿ ಸುಧಾಕರ್ ರಾಜೀನಾಮೆಗೆ ಪಟ್ಟು ಹಿಡಿದಿದೆ.
ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ತೆರಳಿದ ಹಿರಿಯ ನಾಯಕ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗ ಸಚಿವರಿಂದ ದೌರ್ಜನ್ಯಕ್ಕೆ ಒಳಗಾದ ದಲಿತ ಮಹಿಳೆ ಮುನಿಯಮ್ಮ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ,ಕೆಲ ಕಾಲ ಸಂತ್ರಸ್ತರೊಂದಿಗೆ ಪ್ರತಿಭಟನೆ ನಡೆಸಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ,ದಲಿತರ ಆಸ್ತಿ ಕಬಳಿಕೆಗೆ ಸಚಿವರೇ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಸ್ವಾತಂತ್ರ್ಯೋತ್ತರದ 75 ವರ್ಷಗಳ ಆಡಳಿತದಲ್ಲಿ ಇದೊಂದು ಕಪ್ಪುಚುಕ್ಕೆ ಎಂದು ಆರೋಪಿಸಿದರು.
ಸುಧಾಕರ್ (D Sudhakar) ಅವರನ್ನು ಸಚಿವಸಂಪುಟದಿಂದ ವಜಾ ಮಾಡಬೇಕು. ದಲಿತರ ಆಸ್ತಿ ಕಬಳಿಸಿ ದೌರ್ಜನ್ಯ ಮಾಡಿದ್ದು ಖಂಡನೀಯ. ರಸ್ತೆಗಳನ್ನು ಬಂದ್ ಮಾಡಿದ್ದು ಆಕ್ಷೇಪಾರ್ಹ. ಈ ಸರಕಾರ ದಲಿತರನ್ನು ರಕ್ಷಿಸಲು ಬಂದಿದೆಯೇ ಅಥವಾ ದೌರ್ಜನ್ಯ ಮಾಡಲು ಬಂದಿದೆಯೇ ಎಂದು ಆಗ್ರಹಿಸಿದರು.
ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ,
ಇದೊಂದು ವಂಚನೆ ಪ್ರಕರಣ. ನ್ಯಾಯ ಕೋರಿ ಇಲ್ಲಿ ಬಂದಿದ್ದೇವೆ. ಇದರಲ್ಲಿ ಸಚಿವರಿದ್ದಾರೆ ಎಂದರೆ ಇದರ ಹಿಂದೆ ಸರಕಾರ ಇರುವುದು ಸ್ಪಷ್ಟ. ಆದ್ದರಿಂದ ತಕ್ಷಣವೇ ಈ ಸಚಿವರನ್ನು ಸಂಪುಟದಿಂದ ಹೊರ ಹಾಕಬೇಕು. ಇಲ್ಲವಾದರೆ ಅವರೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಸರಕಾರ ಈ ಕುರಿತು ಕೂಲಂಕಷ ಪರಿಶೀಲನೆ ನಡೆಸಬೇಕು. ಶೆಡ್‍ಗಳನ್ನು ಒಡೆಯಲಾಗಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಮಾತನಾಡಿ, ಜನರು ನಿಮಗೆ ಮತ ಕೊಟ್ಟು ಅಧಿಕಾರ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ದೀನದಲಿತರು, ಬಡವರ ಪರ ನೀವು ಎಂದು ಕಾಂಗ್ರೆಸ್ ಚುನಾವಣೆ ಹೇಳಿದ್ದು ಸುಳ್ಳೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಆರೋಪಿ ಸಚಿವರನ್ನು ಸಂಪುಟದಿಂದ ವಜಾ ಮಾಡಿ. ಈ ಕುಟುಂಬಕ್ಕೆ ನ್ಯಾಯ ಕೊಡಿ. ಇಲ್ಲವಾದರೆ ಇನ್ನಷ್ಟು ತೀವ್ರವಾದ ಹೋರಾಟ ಮಾಡಿ ಜನರ ಕಣ್ಣನ್ನು ತೆರೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಮಾತನಾಡಿ, ಸಚಿವರನ್ನು ಅವರ ಸ್ಥಾನದಿಂದ ವಜಾ ಮಾಡಿ. ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದರು. ಈ ಜಾಗವನ್ನು ನೋಡಿದರೆ ಸುಧಾಕರರ ಗೂಂಡಾಗಿರಿ ಗೊತ್ತಾಗುತ್ತದೆ. ಇಲ್ಲಿ ದಲಿತ ಮಹಿಳೆ ಮತ್ತಿತರರು ನಿರಾಶ್ರಿತರಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರು ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಸಚಿವರಾಗಿ ಕಾನೂನಿಗೆ ವಿರುದ್ಧವಾಗಿ ಜಾಗವನ್ನು ಕಬ್ಜಾ ಮಾಡಿದ್ದಾರೆ. ಇದು ಸರಿಯೇ? ಇವರನ್ನು ಖಾಲಿ ಮಾಡಿದ್ದು ಸರಿಯೇ? ಎಸ್‍ಸಿ, ಎಸ್‍ಟಿ ಮಹಿಳೆಯರು, ಪುರುಷರು ನಿರಾಶ್ರಿತರಾಗಿದ್ದಾರೆ. ಅವರು ಎಲ್ಲಿ ಬದುಕಬೇಕು ಎಂದು ಕೇಳಿದರು.
25 ಕೋಟಿ ಸಾಲ ಹೇಗೆ ಸಿಕ್ಕಿದೆ? ಬ್ಯಾಂಕ್ ಇವರದೇ ಆದರೂ ಇವರು ಆಡಿದ್ದೇ ಆಟವೇ? ಕಾನೂನೇ ಪಾಲಿಸಿಲ್ಲವೇ? ಇದರ ಬಗ್ಗೆ ತನಿಖೆ ಆಗಬೇಕು. ಒತ್ತಾಯಪೂರ್ವಕ ಸಹಿ ಹಾಕಿಸಿಕೊಂಡಿದ್ದು, ಹೆಬ್ಬೆಟ್ಟು ಗುರುತು ಹಾಕಿಸಿದ್ದು ಕಾನೂನಿಗೆ ವಿರುದ್ಧವಾಗಿದೆ. ಇದರ ಬಗ್ಗೆಯೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನೂರಾರು ಕೋಟಿ ಬೆಲೆಯ ಜಾಗವನ್ನು ಕನಿಷ್ಠ ಬೆಲೆಯಲ್ಲಿ ಕೊಂಡುಕೊಳ್ಳುವುದು ಯಾವ ನ್ಯಾಯ? ಮಾತೆತ್ತಿದರೆ ಸಾಮಾಜಿಕ ನ್ಯಾಯದ ಮಾತನಾಡುವ ಸಿದ್ದರಾಮಯ್ಯನವರು ಎಲ್ಲಿದೆ ಸಾಮಾಜಿಕ ನ್ಯಾಯ? ಎಲ್ಲಿದೆ ದಲಿತರಿಗೆ ನ್ಯಾಯ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಡಾ.ಅಂಬೇಡ್ಕರ್ ಫೋಟೊ ಇಟ್ಟು ಧರಣಿ ಕುಳಿತ ಇವರಿಗೆ ನ್ಯಾಯ ಕೊಡುವವರು ಯಾರು ಎಂದು ಕೇಳಿದರು. ಗೃಹ ಸಚಿವರು ಇಲ್ಲಿಗೆ ಭೇಟಿ ಕೊಟ್ಟು ದಲಿತ ಕುಟುಂಬಗಳಿಗೆ ನ್ಯಾಯ ಕೊಡಬೇಕು ಎಂದು ಅವರು ಒತ್ತಾಯವನ್ನು ಮುಂದಿಟ್ಟರು


1 ಟಿಪ್ಪಣಿ
Big bonuses, bigger wins at Betano https://betanogame.org/. New players get up to €500 plus free spins on slots. Enjoy secure banking and 24/7 customer support. Betano – the smart choice for serious players.