ಬೆಂಗಳೂರು ಸೆ.17 – ಮಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚು ರೂಪಿಸಿದ್ದ ಬಂಧಿತ ಐಸಿಸ್ ಉಗ್ರ ಶಿವಮೊಗ್ಗ ಮೂಲದ ಅರಾಫತ್ ಅಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ), ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಭಟ್ಕಳ ಮಾದರಿಯಲ್ಲೇ ತೀರ್ಥಹಳ್ಳಿಯನ್ನು ಉಗ್ರರ ನಕ್ಷೆಗೆ ಸೇರಿಸಲು ಪಣ ತೊಟ್ಟಿರುವ ಆಘಾತಕಾರಿ ಸಂಗತಿಯನ್ನು ಅರಾಫತ್ ಅಲಿ ಬಾಯ್ಬಿಟ್ಟಿದ್ದು ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಉಗ್ರ ಅರಾಫತ್ ತೀರ್ಥಹಳ್ಳಿಯನ್ನ ಉಗ್ರರ ನೆಲೆಯಾಗಿಸಲು ಸಂಚು ರೂಪಿಸಿದ್ದನು. ಈ ವಿಚಾರ ಆತನ ಬಂಧನದ ಬಳಿಕ ಬಹಿರಂಗವಾಗಿದೆ. ಈ ಹಿಂದೆ ಭಟ್ಕಳ ಸಹೋದರರಿಂದ ಭಟ್ಕಳ ತಾಲೂಕು ಉಗ್ರವಾದಕ್ಕೆ ಕುಖ್ಯಾತಿ ಪಡೆದಿತ್ತು. ಇದೇರೀತಿ ತೀರ್ಥಹಳ್ಳಿ ಮೂಲದವರಾದ ಮಾಜ್ ಮುನೀರ್, ಶಾರೀಕ್, ಅರಾಫತ್ ಅಲಿ, ಅಬ್ದುಲ್ ಮತೀನ್ ನಾಲ್ವರು ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಸಂಚು ರೂಪಿಸಿದ್ದಾರೆ.
ಆರೋಪಿ ಅರಾಫತ್ ಈ ವಿಚಾರವನ್ನು ಪದೇ ಪದೇ ಮಾಜ್ ಹಾಗೂ ಶಾರೀಕ್ಗೆ ಹೇಳುತ್ತಿದ್ದನು. ಈ ಬಗ್ಗೆ ಎನ್ಐಎಗೆ ಬೇಕಾದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಅಬ್ದುಲ್ ಮತೀನ್, ಅರಾಫತ್ ಅಲಿಯ ತಲೆಯಲ್ಲಿ ತುಂಬುತ್ತಿದ್ದನು. ಸದ್ಯ ಮೂವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದು, ಅಬ್ದುಲ್ ಮತೀನ್ ಬಂಧನ ಆಗಬೇಕಿದೆ. ಈ ನಾಲ್ವರು ತೀರ್ಥಹಳ್ಳಿ ಬ್ರದರ್ಸ್ ಎಂದು ಕುಖ್ಯಾತಿ ಪಡೆಯಬೇಕು ಎಂದುಕೊಂಡಿದ್ದರು.
ಯಾಸಿನ್ ಭಟ್ಕಳ, ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ. ಭಟ್ಕಳ ಸಹೋದರರು ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರಿಂದ ಭಟ್ಕಳ ತಾಲೂಕು ಉಗ್ರವಾದಕ್ಕೆ ಕುಖ್ಯಾತಿ ಪಡೆದಿದೆ. ಯಾಸಿನ್ ಭಟ್ಕಳನನ್ನು 2013ರ ಆಗಸ್ಟ್ 28 ರಂದು ಭಾರತೀಯ ಗುಪ್ತಚರ ಅಧಿಕಾರಿಗಳು ಭಾರತ-ನೇಪಾಳ ಗಡಿಯಲ್ಲಿ ಬಂಧಿಸಿದ್ದರು.