ಬೆಂಗಳೂರು, ಸೆ.26- ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ನಡೆಸಿರುವ ಬೆಂಗಳೂರು ಬಂದ್ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ಸರಬರಾಜು ಮಾಡಿದ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ.
ಸತ್ತ ಇಲಿ ಇರುವ ಊಟವನ್ನು ಸರಬರಾಜು ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಎಂ.ಎನ್.ಅನುಚೇತ್ ಅವರು ಹೋಟೆಲ್ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಆಹಾರ ಪೊಟ್ಟಣದಲ್ಲಿ ಇಲಿ ಪತ್ತೆಯಾಗಿರುವುದು ಗಂಭೀರ ಸಂಗತಿಯಾಗಿದೆ,ಸತ್ತ ಇಲಿಯಿರುವ ರೈಸ್‌ಬಾತ್ ಪೂರೈಕೆ ಮಾಡಿದ ಹೋಟೆಲ್ ಮಾಲೀಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆಯಿಂದ ಭದ್ರತೆಗೆ ನಿಯೋಜಿಸಲಾಗಿದ್ದ ಯಶವಂತಪುರ ಸಂಚಾರ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್ ಬಾತ್) ಸತ್ತ ಇಲಿ ಪತ್ತೆಯಾಗಿದೆ.
ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿದೆ. ಅದನ್ನು ನೋಡಿ ಪೊಲೀಸ್ ಸಿಬ್ಬಂದಿ ಹೌಹಾರಿದ್ದಾರೆ.
ಇಲಿ ಸತ್ತು ಬಿದ್ದಿರುವ ಊಟ ತಿಂದು ಹೆಚ್ಚು ಕಡಿಮೆಯಾದರೆ, ಯಾರು ಹೊಣೆ ಎಂದು ಕಿಡಿಕಾರಿದ್ದಾರೆ. ಇನ್ನು ಖಾಸಗಿ ಹೋಟೆಲ್ ನಿಂದ ಕಳಪೆ ಮಟ್ಟದ ಊಟ ಪೂರೈಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಶೋಕ್ ಟಿಫಿನ್ ಸೆಂಟರ್ನಿಂದ ಉಪಹಾರ ಪೂರೈಕೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಅಶೋಕ್ ಟಿಫಿನ್ ಸೆಂಟರ್ ಒಟ್ಟು 180 ಊಟ ನೀಡಿದೆ.
ಪೊಲೀಸರಿಗೆ ತರಾಟೆ:
ಇನ್ನೂ ಊಟ ಪೂರೈಕೆ ಮಾಡಿದ ಯಶವಂತಪುರ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿರುವ ಅನುಚೇತ್ ಒಂದು ದಿನದ ಊಟಕ್ಕೆ ಸರ್ಕಾರ 200 ರೂ ಕೊಡಲಿದೆ ಆದರೆ, ಗುಣಮಟ್ಟದ ಊಟ ಯಾಕೆ ಕೊಟ್ಟಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು. ಅಲ್ಲದೇ ಯಶವಂತಪುರ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಗೆ ನೋಟೀಸ್ ನೀಡಿದ್ದಾರೆ.
ಅದೃಷ್ಟವಶಾತ್ ಯಾರೂ ಸತ್ತ ಇಲಿ ಇದ್ದ ಊಟ ಸೇವಿಸಿಲ್ಲ.