ಬೆಂಗಳೂರು,ಡಿ.22: ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಸಮಯದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆ (Yuvanidhi) ಚಾಲನೆಗೆ ರಂಗ ಸಜ್ಜುಗೊಂಡಿದೆ.
ಫಲಾನುಭವಿಗಳ ನೋಂದಣಿಗೆ ಇದೇ ಡಿಸೆಂಬರ್ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬರುವ ಜನವರಿ 12 ರಂದು ವಿವೇಕಾನಂದ ಜಯಂತಿ ದಿನಾಚರಣೆಯಂದು ಶಿವಮೊಗ್ಗದಲ್ಲಿ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಎಲ್ಲಾ ಅರ್ಹ ಫಲಾನುಭವಿಗಳು ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು ಡಿಸೆಂಬರ್ 26 ರಂದು ಯೋಜನೆಯ ನೋಂದಣಿಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು
ಪ್ರಸ್ತುತ ‘ಯುವನಿಧಿ’ ಯೋಜನೆಯನ್ನು ರಾಜ್ಯದ ಯುವಕ/ ಯುವತಿಯರಿಗೆ ಸಮರ್ಪಿತವಾಗಿದ್ದು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಮುಖಾಂತರ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಯುವನಿಧಿ ಯೋಜನೆಗೆ ಕರ್ನಾಟಕ ರಾಜ್ಯಾದ್ಯಂತ ಒಟ್ಟು 5.29,153 ಫಲಾನುಭವಿಗಳು ಇರುವುದನ್ನು ಅಂದಾಜಿಸಲಾಗಿದೆ. ಅವರಲ್ಲಿ ಪದವೀಧರರು 4,81,000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರು 48,153 ಆಗಿದ್ದಾರೆ. ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಯೋಜನೆಯಡಿ ರಾಜ್ಯದ ಪದವೀಧರರು/ ಸ್ನಾತಕೋತ್ತರ ಪದವೀಧರರು/ ಡಿಪ್ಲೋಮಾ ತೇರ್ಗಡೆಯಾದವರು ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಪದವೀಧರರಿಗೆ ಮಾಸಿಕವಾಗಿ ರೂ.3,000/- ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1,500/- ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ನೀಡಲು ತೀರ್ಮಾನಿಸಲಾಗಿದೆ.
ಪದವಿ/ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ 6 ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು ಎಂದು ಸ್ಪಷ್ಟಪಡಿಸಿದರು ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ ಪದವಿ/ ಡಿಪ್ಲೋಮಾ 2023ರಲ್ಲಿ ತೇರ್ಗಡೆಯಾಗಿರಬೇಕು.ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ/ ಡಿಪ್ಲೋಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕ ರಹವಾಸಿಯಾಗಿರಬೇಕು.
ಆದರೆ,ಸರ್ಕಾರಿ,ಸರ್ಕಾರದ ಅನುದಾನಿತ ಸಂಸ್ಥೆ, ಖಾಸಗಿ ವಲಯಗಳಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು.ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳು,ವಿದ್ಯಾಭ್ಯಾಸ ಮುಂದುವರೆಸುವ ಅಭ್ಯರ್ಥಿಗಳಿಗೆ ಈ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಿದರು.