ಮಂಡ್ಯ,ಡಿ.27- ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ವಿರುದ್ಧ ಪ್ರಚೋದನಕಾರಿ ಭಾಷಣ, ಮಹಿಳೆಯರ ಚುಡಾವಣೆ, ಲೈಂಗಿಕ ನಿಂದನೆ, ಧಾರ್ಮಿಕ ನಿಂದನೆ, ಗಲಭೆಗೆ ಪ್ರಚೋದನೆ ಸೇರಿ ಹಲವು ಸೆಕ್ಷನ್ ಗಳಡಿ ದೂರುಗಳನ್ನು ದಾಖಲಿಸಲಾಗಿದೆ.ಅಷ್ಟೇ ಅಲ್ಲ ಇವರನ್ನು ರೌಡಿ ಪಟ್ಟಿಗೆ ಸೇರಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ.
ಒಂದೇ ಭಾಷಣ ಆಧರಿಸಿ ಹಲವು ಸೆಕ್ಷನ್ ಗಳಡಿ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ದೂರು ದಾಖಲಿಸಿದ್ದಾರೆ.
ಇದನ್ನು ಆಧರಿಸಿ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಶ್ರೀರಂಗಪಟ್ಟಣದ ಗಂಜಾಂನಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಸಂಕೀರ್ತನಾ ಯಾತ್ರೆ ವೇಳೆ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದರು.ಈ ವೇಳೆ ಅವರು ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ತ್ರಿವಳಿ ತಲಾಕ್ ಹೇಳುವ ಅವಕಾಶ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತ್ರಿವಳಿ ತಲಾಕ್ ರದ್ದು ಮಾಡಿದೆ.
ಬಹು ಪತ್ನಿತ್ವ ಪಿಡುಗು ಮತ್ತು ತ್ರಿವಳಿ ತಲಾಕ್ ಕಾಟದಿಂದಾಗಿ ಈ ಹಿಂದೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ.ಈಗ ತ್ರಿವಳಿ ತಲಾಕ್ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವಾಗಿದೆ ಎಂದು ಕಲ್ಲಡ್ಕ ಹೇಳಿದ್ದರು.
ಮುಸ್ಲಿಂ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಹೋರಾಟಗಾರ್ತಿ ನಜ್ಮಾ ನಜೀರ್ ದೂರು ನೀಡಿದ್ದರು.ಇದನ್ನು ಆಧರಿಸಿ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಮಹಿಳೆಯರನ್ನು ಚುಡಾಯಿಸಿರುವುದು, ಲೈಂಗಿಕವಾಗಿ ಅವಮಾನಿಸಿರುವುದು, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿರುವುದು, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿರುವುದು, ಧರ್ಮವನ್ನು ಅವಮಾನಿಸಿರುವುದು, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿರುವುದು, ಸಾವು ನೋವುಗಳನ್ನು ಪ್ರಚೋದಿಸಿರುವುದು ಮುಂತಾದ ಆರೋಪಗಳನ್ನು ಹೊರಿಸಿ ನಜ್ಮಾ ದೂರು ಸಲ್ಲಿಸಿದ್ದಾರೆ. ಇದನ್ನು ಆಧರಿಸಿ, ಐಪಿಸಿ ಸೆಕ್ಷನ್ 354, 294, 509, 506, 153A, 295, 295A, 298ರಡಿ ಪೊಲೀಸರು ಪ್ರಕರಣ ದಾಖಲು ಮಾಡಿ ರೌಡಿ ಶೀಟರ್ ತೆರೆಯುವಂತೆಯೂ ನಜ್ಮಾ ನಜೀರ್ ಮನವಿ ಮಾಡಿದ್ದಾರೆ.
ಮುಸಲ್ಮಾನ ಹುಡುಗರು ಅಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರೂ ಮತಾಂತರ ಮಾಡುತ್ತಿದ್ದಾರೆ. ನಿಮ್ಮ ಮುಸ್ಲಿಂ ಸಮಾಜದಲ್ಲಿ ಹುಡುಗಿಯರು ಇಲ್ಲವಾ? ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ? ನಿಮಗೆ ತ್ರಿವಳಿ ತಲಾಖ್ ನೀಡುವ ಪದ್ಧತಿಯನ್ನು ತೆಗೆದು ಹಾಕಿದ್ದು ನರೇಂದ್ರ ಮೋದಿ ಅಲ್ಲವೇ ಎಂದು ಭಟ್ ಪ್ರಶ್ನಿಸಿದ್ದರು.
ನಿಮಗೆ ತಾಕತ್ ಇದ್ದರೆ ಹಿಜಾಬ್ ನಿಷೇಧ ವಾಪಸ್ ಪಡೆಯಿರಿ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಮವಸ್ತ್ರ ಜಾರಿ ಮಾಡಿದ್ದೇ ಏಕರೂಪತೆ ತರುವ ಉದ್ದೇಶದಿಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ಮಕ್ಕಳಲ್ಲಿ ಯಾಕೆ ತಾರತಮ್ಯ ಹುಟ್ಟು ಹಾಕುತ್ತೀರಿ? ಅಲ್ಪಸಂಖ್ಯಾತರ ಅಭಿವೃದ್ಧಿಗೆ 10,000 ಕೋಟಿ ರೂ. ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಯಾರಪ್ಪನ ಮನೆಯ ದುಡ್ಡು ಕೊಡುತ್ತೀರಿ? ತೆರಿಗೆ ಕಟ್ಟುವವರು ಹಿಂದುಗಳು. ನಮ್ಮ ಹಣ ಅಲ್ಪಸಂಖ್ಯಾತರಿಗೆ ಕೊಡುತ್ತೀರಾ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಿಸಿದ್ದರು.ನಾವು
ಶಾಲೆಯೊಳಗೆ ಜೈ ಶ್ರೀರಾಮ್ ಎಂದು ಕೂಗುತ್ತೇವೆ. ಹಿಜಾಬ್ ನಿಷೇಧ ವಾಪಸ್ ತೆಗೆಯುತ್ತಾರಂತೆ. ಅವರು ಹಿಜಾಬ್ ಹಾಕಿಕೊಂಡು ಬರಲಿ. ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ. ಕೇಸರಿ ಟೋಪಿ ಹಾಕಿಕೊಂಡು ಬರುತ್ತೇವೆ ಎಂದು ಕಲ್ಲಡ್ಕ ಕಿಡಿಕಾರಿದ್ದರು.
Also Read | Latest Kannada News | Kannada News