ಮುಂದಿನ ದಿನಗಳಲ್ಲಿ ವಿಶ್ವದ ಎಲ್ಲೆಡೆ ನೌಕರಿಯಲ್ಲಿರುವ ನೂರು ಜನರ ಪೈಕಿ ನಲ್ವತ್ತು ಮಂದಿ ಉದ್ಯೋಗ ಕಳೆದುಕೊಳ್ಳಲಿರುವ ಸಾಧ್ಯತೆ ಇದೆ ಎಂದು IMF ನ ಮುಖ್ಯಸ್ಥೆ ಕ್ರಿಸ್ಟಲಿನ ಜೊರ್ಜಿಯೇವ ಹೇಳಿದ್ದಾರೆ. ಇದಾಗುವುದು ಕೃತಕ ಬುದ್ದಿ (AI) ತಂತ್ರಜ್ಞಾನದಿಂದ ಎಂದೂ ಅವರು ಹೇಳಿದ್ದಾರೆ. ಈ ಸಮಸ್ಯೆಯೊಂದಿಗೆ ವಿಶ್ವದಾದ್ಯಂತ ತಾರತಮ್ಯಗಳು ಮತ್ತು ಶ್ರೀಮಂತರ ಹಾಗು ಬಡವರ ನಡುವಿನ ಸಂಪತ್ತಿನ ಅಂತರ ಕೂಡ ಹೆಚ್ಚಾಗಲಿದೆ ಎಂದೂ ಹೇಳಿದ್ದಾರೆ.
ಈ ಕಾರಣಗಳಿಂದಾಗಿ ವಿಶ್ವದಾದ್ಯಂತ ಸಾಮಾಜಿಕ ಸಂಘರ್ಷಗಳು ನಡೆಯುವ ಸಾಧ್ಯತೆ ಇದ್ದು ಅದರಿಂದ ವಿಶ್ವ ಬಹಳ ತೊಂದರೆಯನ್ನು ಅನುಭವಿಸಬಹುದು ಎಂದೂ ಬರೆದುಕೊಂಡಿದ್ದಾರೆ. ಜೊರ್ಜಿಯೇವ ಅವರು ಡೆವೊಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡುವ ಮೊದಲು ಈ ಲೇಖನವನ್ನು ತಾವು ಹೇಳಲಿರುವ ವಿಚಾರಕ್ಕೆ ಮುನ್ನುಡಿಯಂತೆ ಬರೆದಿದ್ದಾರೆ. ಆದರೆ ಇದೆ ವೇದಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ AI ಕಂಪನಿ Open AI ನ ಮುಖ್ಯಸ್ಥ ಸ್ಯಾಮ್ ಆಲ್ಟ್ ಮ್ಯಾನ್ ಕೂಡ ಮಾತನಾಡಲಿದ್ದಾರೆ. ಆಲ್ಟ್ ಮ್ಯಾನ್ ಅವರು AI ಇಂದಾಗಿ ಇನ್ನು ನಾಲ್ಕನೇ ಉತ್ಪಾದನಾ ಕ್ರಾಂತಿಯನ್ನು ವಿಶ್ವ ನೋಡಲಿದೆ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
AI ಅನ್ನು ಬಳಸಲಿರುವ ಕಂಪೆನಿಗಳಿಂದಾಗಿ ಎಷ್ಟು ಒಳ್ಳೆಯದಾಗಲಿದೆಯೊ ಅಷ್ಟೇ ಕೆಟ್ಟದ್ದೂ ಆಗಲಿದೆ ಎಂದು ಈಗಾಗಲೇ ಅಂದಾಜು ಮಾಡಲಾಗಿದೆ. ಈತನಕ ಬಳಸಲ್ಪಟ್ಟಿರುವ AI ಇಂದಾಗಿಯೇ ಬಹಳಷ್ಟು ಕ್ಷೇತ್ರಗಳಲ್ಲಿ ಜನರು ಕೆಲಸ ಕಳೆದು ಕೊಂಡು ಕಂಪನಿಗಳು ಕನಿಷ್ಠ ವೆಚ್ಚದಲ್ಲಿ ಅದೇ ಕೆಲಸವನ್ನು AI ಮೂಲಕ ಮಾಡಿಸಿಕೊಳ್ಳುತ್ತಿವೆ ಎನ್ನುವುದು ವರದಿಯಾಗಿದೆ. ಕಿರಿಯಾಶೀಲ ಬರವಣಿಗೆ, ದಾಖಲೆ ಮಾಡುವುದು, ಲೆಕ್ಕ ಪಾತ್ರದ ನಿರ್ವಹಣೆ, ದತ್ತಾಂಶದ ವಿಶ್ಲೇಷಣೆ, ಮಾಹಿತಿ ಕ್ರೊಡೀಕರಣ ಮುಂತಾದ ಅನೇಕ ಕೆಲಸಗಳನ್ನು AI ಈಗಾಗಲೇ ಕ್ಷಣಾರ್ಧದಲ್ಲಿ ಮಾಡಿ ಮುಗಿಸಿ ಕಂಪನಿಗಳು ಹಣ ಉಳಿಸುವಂತೆ ಮಾಡುತ್ತಿದೆ. ಭಾರತದಂತಹ ದೇಶಗಳಲ್ಲಿ ಸಧ್ಯಕ್ಕೆ ಸರ್ಕಾರಗಳು ಕಡಿಮೆ ಜನರಿಗೆ ಸರ್ಕಾರಿ ಉದ್ಯೋಗ ನೀಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಖಾಸಗಿ ಕ್ಷೇತ್ರದಲ್ಲೂ ಕೆಲಸಗಳ ಕೊರತೆಯಾಗಿಬಿಟ್ಟರೆ ಅದು ಸಾಮಾಜಿಕ ವಿಪ್ಲವಕ್ಕೆ ಕಾರಣವಾಗಬಹುದು ಎಂದು ಅನೇಕ ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ಹೊರ ಹೊಮ್ಮುತ್ತಿರುವ ಆರ್ಥಿಕತೆಗಳಾದ ಭಾರತ ಮತ್ತು ಬ್ರೆಜಿಲ್ ನಂಥ ದೇಶಗಳಲ್ಲಿ AI ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲು ಇನ್ನಷ್ಟು ವರ್ಷಗಳು ಬೇಕಾಗಬಹುದು ಎನ್ನುವ ಅರ್ಥಶಾಸ್ತ್ರಜ್ಞರು ಮುಂದುವರಿದ ರಾಷ್ಟ್ರಗಳು ಈಗಾಗಲೇ ಬಹಳಷ್ಟು ತಂತ್ರಜ್ಞಾನವನ್ನು ಬಳಸುವುದರಿಂದ ಈ ದೇಶಗಳಲ್ಲಿ ನೂರಕ್ಕೆ ಸುಮಾರು 60 ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಆ ಕಾರಣದಿಂದಾಗಿ ಸರ್ಕಾರಗಳು ಈ ಕೂಡಲೇ ಇದೆಲ್ಲದರ ಬಗ್ಗೆ ಮೊದಲೇ ತಯಾರಿ ನಡೆಸಿಕೊಂಡು ತಮ್ಮ ಜನರಿಗೆ ಸಾಮಾಜಿಕ ಸುರಕ್ಷತೆ ನೀಡುವ ಬಗ್ಗೆ ತಲೆಕೆಡಿಸಿಕೊಂಡು ಜನ ಧೃತಿಗೆಡದಂತೆ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ.