ಬೆಂಗಳೂರು,ಜ.27- ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಜಗತ್ತಿನೆಲ್ಲೆಡೆ ಸುದ್ದಿ ಮಾಡುತ್ತಿದೆ.ಇದನ್ನು ಬಗೆಹರಿಸಲು ಸಂಚಾರಿ ಪೊಲೀಸರು ಮತ್ತು ಸರ್ಕಾರ ಹಲವಾರು ಕ್ರಮ ಕೈಗೊಳ್ಳುತ್ತಿದ್ದರೂ ಅವುಗಳು ನಿರೀಕ್ಷಿತ ಫಲಿತಾಂಶ ತರುತ್ತಿಲ್ಲ.
ಬೆಂಗಳೂರಿನ ಕೆಲವು ಖಾಸಗಿ ಸಂಸ್ಥೆಗಳೂ ಕೂಡ ಸಂಚಾರ ದಟ್ಟಣೆ ನಿವಾರಿಸಲು ಹಲವಾರು ಪ್ರಯೋಗ ಮಾಡುತ್ತಿವೆ.ಇವುಗಳಿಂದ ಕೆಲವು ಬಾರಿ ಕೆಲವು ಕಡೆ ಒಳ್ಳೆಯ ಫಲಿತಾಂಶ ಸಿಕ್ಕಿದ್ದರೂ ಎಲ್ಲಾ ಕಡೆಗಳಲ್ಲಿ ಇದು ಯಶಸ್ವಿಯಾಗಿಲ್ಲ. ಹೀಗಾಗಿ ಸಂಚಾರಿ ಪೊಲೀಸರು ದಟ್ಟಣೆ ನಿಯಂತ್ರಣ ಮಾಡಲು ಒಂದಲ್ಲ ಒಂದು ಪರಿಹಾರ ಹುಡುಕುತ್ತಲೇ ಇದ್ದಾರೆ.ಇದರ ಭಾಗವಾಗಿ ಈಗ
ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಡ್ರೋನ್ ಕ್ಯಾಮರಾ ಮೊರೆ ಹೋಗಿದ್ದಾರೆ.
ನಗರದಲ್ಲಿ ಇನ್ನು ಮುಂದೆ ಪ್ರತಿ ದಿನವೂ ಡ್ರೋನ್ ಕ್ಯಾಮಾರಾ ಗಳು ಹಾರಾಡಲಿದ್ದು,ಅವುಗಳ ಮೂಲಕ ಪ್ರಮುಖ ಟ್ರಾಫಿಕ್ ಜಂಕ್ಷನ್ ನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಟೋಯಿಂಗ್ ಇಲ್ಲದ ಕಾರಣ ವಾಹನ ನಿಲುಗಡೆಗೆ ಅವಕಾಶ(ನೋ ಪಾರ್ಕಿಂಗ್) ಇಲ್ಲದ ಕಡೆಗಳಲ್ಲಿ ವಾಹನ ಸವಾರರು ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಮಾರ್ಕೆಟ್ ರಸ್ತೆಗಳು, ಮುಖ್ಯ ಜಂಕ್ಷನ್ ನ ಸಂಪರ್ಕಿಸುವ ರಸ್ತೆಗಳು, ಸಣ್ಣ ಸಣ್ಣ ರಸ್ತೆಗಳಲ್ಲಿ ಹೇಗೆ ಬೇಕೆಂದರೆ ವಾಹನ ಪಾರ್ಕ್ ಮಾಡಿ ಹೋಗುತ್ತಿದ್ದಾರೆ. ಅಲ್ಲದೇ ಕೆಲ ಮುಖ್ಯ ಜಂಕ್ಷನ್ ಗಳಲ್ಲಿ ಸಿಗ್ನಲ್ ಬಿಡುವುದರ ಬಗ್ಗೆ ಗೊಂದಲ ಇರಲಿದೆ. ಒಂದು ಜಂಕ್ಷನ್ನಲ್ಲಿ ಯಾವ ರೂಟ್ ನಲ್ಲಿ ಹೆಚ್ಚು ವಾಹನಗಳಿದೆ. ಯಾವ ಸಿಗ್ನಲ್ ಬೇಗ ಬಿಡಬೇಕು, ಸಿಗ್ನಲ್ ಬಿಟ್ಟಾಗ ವಾಹನಗಳನ್ನು ಸುಗಮ ಸಂಚಾರಗೊಳಿಸುವುದು, ನಿಯಂತ್ರಣ ಮಾಡುವಲ್ಲಿ ಸಂಚಾರ ಪೊಲೀಸರ ವೈಫಲ್ಯ ಇದೆಲ್ಲವನ್ನೂ ಗಮನಿಸಿ ಸಂಚಾರ ಸುಗಮಗೊಳಿಸಲು ಡ್ರೋನ್ ಸಹಾಯವಾಗಲಿದೆ.
ಡ್ರೋನ್ ಹಾರಿಸಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಪರಿಹರಿಸಲು ಸಹಾಯವಾಗಲಿದೆ, ಕೆಲವೊಮ್ಮೆ ಆ್ಯಂಬುಲೆನ್ಸ್ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡರೆ ವಾಹನ ದಟ್ಟಣೆ ಸುಗಮಗೊಳಿಸಲು ಸಹಾಯವಾಗಲಿದೆ. ಇದರಿಂದ ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಸರಿಪಡಿಸಬಹುದು.
ಮೆಜೆಸ್ಟಿಕ್, ಎಂಜಿ ರೋಡ್, ರಾಜಭವನ, ಚಾಲುಕ್ಯ ಸರ್ಕಲ್, ತುಮಕೂರು ರಸ್ತೆ, ಹೆಬ್ಬಾಳ, ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತ್ತಹಳ್ಳಿ, ಬೆಳ್ಳಂದೂರು ಹೀಗೆ ಯಾವ್ಯಾವ ಜಂಕ್ಷನ್ ಗಳಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಯಿದೆ ಅಲ್ಲೆಲ್ಲಾ ಡ್ರೋನ್ಗಳ ಬಳಕೆ ಮಾಡಿಕೊಳ್ಳಲಾಗುತ್ತೆ. ಡ್ರೋನ್ಗಳ ಮೂಲಕ ಪರಿಶೀಲನೆ ನಡೆಸಿ ಕೂಡಲೇ ಸಂಚಾರ ಸುಗಮಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಪ್ರಾಯೋಗಿಕವಾಗಿ ಪ್ರಮುಖ ಜಂಕ್ಷನ್ ಗಳಲ್ಲಿ ಡ್ರೋನ್ಗಳು ಹಾರಾಡುತ್ತಿವೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಡ್ರೋನ್ ಗಳು ಹಾರಾಡಲಿವೆ