ಬೆಂಗಳೂರು, ಫೆ.2- ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಇಲ್ಲದಿದ್ದರೂ ತಮ್ಮ ಮಕ್ಕಳಿಗೆ ಓಡಿಸಲು ಬೈಕ್ ಕೊಟ್ಟ ಪೋಷಕರಿಗೆ ಬೆಂಗಳೂರು ಪೊಲೀಸರು (Bangalore Traffic Police) ಬಿಸಿ ಮುಟ್ಟಿಸಿದ್ದಾರೆ.
18 ವರ್ಷ ಪೂರ್ಣಗೊಳ್ಳದ ವಿದ್ಯಾರ್ಥಿಗಳು ಡಿ.ಎಲ್.ಇಲ್ಲದೇ ಇದ್ದರೂ ಬೆಂಗಳೂರಿನಲ್ಲಿ ಬೈಕ್ ಚಲಾಯಿಸುವ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಇದೀಗ ಪೋಷಕರಿಗೆ ದಂಡ ಹಾಕಿ ಬೈಕ್ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದ್ದಾರೆ.
ಈ ಕುರಿತಂತೆ ವಿಶೇಷ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳ ಪೋಷಕರಿಗೆ ದಂಡ ವಿಧಿಸಿ ಬೈಕ್ ನೀಡದಂತೆ ತಾಕೀತು ಮಾಡಿದ್ದಾರೆ. ಪರವಾನಗಿ ಹೊಂದದ 18 ವರ್ಷ ಪೂರ್ಣಗೊಳ್ಳದ ನಗರದ 1,500ಕ್ಕೂ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೆ ಸಂಚಾರ ಪೊಲೀಸರು ದಂಡದ ಬರೆ ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಮಕ್ಕಳು ಶಾಲಾ-ಕಾಲೇಜುಗಳಿಗೆ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗಿ ಅಪಘಾತಗಳಿಗೆ ಕಾರಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರ ಪೊಲೀಸರು ನಗರದ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ.
ಘಟನೆಗಳು ಮರುಕಳಿಸಿದರೆ ಪ್ರಕರಣ ದಾಖಲಿಸುವುದಾಗಿಯೂ ಪೊಲೀಸರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಶಾಲೆಗಳಿಂದ ಸರ್ಕ್ಯುಲೇಷನ್ ಹೊರಡಿಸಲು ಸೂಚಿಸಲಾಗಿದೆ.
ಇದಲ್ಲದೇ ನಗರದ 23 ಕ್ಕೂ ಹೆಚ್ಚು ಕಾಲೇಜುಗಳ ಬಳಿ ನಡೆಸಿದ ಕಾರ್ಯಾಚರಣೆ ನಡೆಸಿ ಕಾಲೇಜು ಆವರಣದಲ್ಲಿದ್ದ ಸುಮಾರು 800 ವಾಹನಗಳಿಗೆ ಈಗಾಗಲೇ ದಂಡ ವಿಧಿಸಲಾಗಿದೆ.
ಪರೀಕ್ಷೆ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಈ ಬಾರಿ ದಂಡ ಮಾತ್ರ ವಿಧಿಸಲಾಗಿದೆ. ಮತ್ತೊಮ್ಮೆ ಇದೇ ರೀತಿ ನಡೆದರೆ ಐಪಿಸಿ ಸೆಕ್ಷನ್ ನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.