ನವದೆಹಲಿ,ಫೆ.2- ಅಯೋಧ್ಯೆ (Ayodhya) ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರ,ಹಾಗೂ ಅದರಲ್ಲಿ ವಿರಾಜಮಾನನಾಗಿರುವ ಬಾಲರಾಮನ ಮೂರ್ತಿ ಜಗತ್ತಿನ ಗಮನ ಸೆಳೆದಿದೆ.ಅನೇಕ ಮಂದಿ ಭಕ್ತರು ಮತ್ತು ಆಸಕ್ತರು ಅಯೋಧ್ಯೆಯತ್ತ ಮುಖ ಮಾಡಿದರೆ,ಪಾತಕಿ ಐಸಿಸ್ ಉಗ್ರರು ಮಾತ್ರ ಕೆಂಗಣ್ಣು ಬೀರಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಲ್ಪಸಂಖ್ಯಾತರ ಮೇಲಿನ ದಾಳಿ ಎಂದು ಬಣ್ಣಿಸಿರುವ ಐಸಿಸ್ ಇದಕ್ಕಾಗಿ ಭಾರತದ ಮೇಲೆ ದಾಳಿ ನಡೆಸಿ, ಹಿಂದುಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಹಾಕಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಐಸಿಸ್ ಭಯೋತ್ಪಾದಕ ಸಂಘಟನೆಯ ಮುಖವಾಣಿ ವಾಯ್ಸ್ ಆಫ್ ಖುರಾಸನ್ ಮ್ಯಾಗಜಿನ್‌ನಲ್ಲಿ ಭಾರತದ ಮೇಲೆ ದಾಳಿ ಕುರಿತು ಬೆದರಿಕೆ ಹಾಕಲಾಗಿದೆ.
ವಾಯ್ಸ್ ಆಫ್ ಖುರಾಸನ್ ಮ್ಯಾಗಜಿನ್‌ನ ಇ-ವರ್ಷನ್‌ಅನ್ನು ಸಾಮಾಜಿಕ ಜಾಲತಾಣಗಳು ಹಾಗೂ ಡಾರ್ಕ್‌ವೆಬ್ ವೇದಿಕೆಗಳ ಮೂಲಕ ಐಸಿಸ್ ಉಗ್ರ ಸಂಘಟನೆ ಹಂಚಿಕೊಂಡಿದೆ. “ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ, ಅಕ್ರಮವಾಗಿ ಮಂದಿರ ನಿರ್ಮಿಸಲಾಗಿದೆ. 2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಿದೆ. ಇದೆಲ್ಲದಕ್ಕೂ ಸೇಡು ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ಮಾಡಲಾಗುತ್ತದೆ. ಹಿಂದುಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುತ್ತದೆ” ಎಂದು ಮ್ಯಾಗಜಿನ್ ಮೂಲಕ ಬೆದರಿಕೆ ಹಾಕಲಾಗಿದೆ.
ನಾವು ಭಾರತ ಸರ್ಕಾರಕ್ಕೆ ನೇರವಾಗಿ ಹೇಳುತ್ತಿದ್ದೇವೆ. ನಾವು ಖಡ್ಗಗಳನ್ನು ಹಿಡಿದು ಭಾರತಕ್ಕೆ ಬರುತ್ತೇವೆ. ಖಂಡಿತವಾಗಿಯೂ, ಗೋದ್ರಾ ಹತ್ಯಾಕಾಂಡ, ಬಾಬ್ರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ. ಕಾಶ್ಮೀರ, ಗುಜರಾತ್, ಮುಜಫ್ಫರ್‌ನಗರದ ಘಟನೆಗಳಿಗೂ ಸೇಡು ತೀರಿಸಿಕೊಳ್ಳುತ್ತೇವೆ. ಪ್ರವಾದಿ ಮೊಹಮ್ಮದ್ ಅವರ ಆಶಯಗಳನ್ನು ಈಡೇರಿಸಲು ನಾವು ಏನು ಬೇಕಾದರೂ ಮಾಡುತ್ತೇವೆ” ಎಂದು ಉಲ್ಲೇಖಿಸಲಾಗಿದೆ.
ಕಳೆದ ನವೆಂಬರ್‌ನಲ್ಲಿ ಕಾಶ್ಮೀರದಲ್ಲಿ ವಿದ್ಯಾರ್ಥಿಯೊಬ್ಬ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಪ್ರಕರಣಕ್ಕೂ ಸೇಡು ತೀರಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ದಾಳಿಯ ಕುರಿತು ಐಸಿಸ್ ತನ್ನ ಮುಖವಾಣಿಯಲ್ಲೇ ಬರೆದುಕೊಂಡಿರುವುದು ಪತ್ತೆಯಾದ ಬೆನ್ನಲ್ಲೇ ದೇಶಾದ್ಯಂತ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ.ಕೇಂದ್ರ ಗುಪ್ತದಳ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು,ವ್ಯಾಪಕ ಭದ್ರತಾ ಕ್ರಮ ಹಾಗೂ ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ.
ಸದ್ಯದಲ್ಲೇ ಲೋಕಸಭಾ ಚುನಾವಣೆ ಕೂಡಾ ನಡೆಯಲಿದೆ ಈ ವೇಳೆ ರಾಜಕೀಯ ನಾಯಕರ ಸಂಚಾರ,ಚಟುವಟಿಕೆಗಳು ಕೂಡಾ ಹೆಚ್ಚಲಿವೆ ಹೀಗಾಗಿ ಹೆಚ್ಚು ಮುಂಜಾಗ್ರತೆವಹಿಸಲು ಸೂಚಿಸಿದೆ.