ಬೆಂಗಳೂರು, ಫೆ.14- ಲಕ್ಷಾಂತರ ಭಕ್ತರು ಭೇಟಿ ನೀಡುವ ಪುರಾಣ ಪ್ರಸಿದ್ಧ ಯಾತ್ರಾಸ್ಥಳ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಘಾಟಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಎಸ್ ರವಿ ಅವರ ಪರವಾಗಿ ಕಾಂಗ್ರೆಸ್ ನ ಯುಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿಗೆ ಪ್ರಾಧಿಕಾರ ರಚನೆಯ ಪ್ರಸ್ತಾಪ ಸಚಿವ ಸಂಪುಟದ ಮುಂದಿದ್ದು,ಶೀಘ್ರದಲ್ಲೇ ಅನುಮೋದನೆ ಪಡೆಯಲಾಗುವುದು ಎಂದರು.
ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಾರ್ಷಿಕ 60 ರಿಂದ 70 ಲಕ್ಷ ಭಕ್ತಾಧಿಗಳು ಆಗಮಿಸುತ್ತಾರೆ.ಈ ದೇವಸ್ಥಾನದಿಂದ ವಾರ್ಷಿಕ ಸರಾಸರಿ 8 ಕೋಟಿ ರೂಪಾಯಿ ಆದಾಯ ಸರ್ಕಾರಕ್ಕೆ ಬರುತ್ತಿದೆ.ಈ ದೇವಾಲಯದ ಪರಿಸರದಲ್ಲಿ ಅಗತ್ಯ ಮೂಲ ಸೌಕರ್ಯದ ಕೊರತೆಯಿದೆ.ಇದನ್ನು ಮನಗಂಡು
ಅಲ್ಲಿಗೆ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಧಿಕಾರದಿಂದ ನೆರವಾಗಲಿದೆ ಎಂದು ತಿಳಿಸಿದರು.
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾಮಾನ್ಯ ದಿನಗಳಲ್ಲಿ ಅಂದಾಜು 2 ಸಾವಿರ ಮಂಗಳವಾರ 7ಸಾವಿರ ಭಾನುವಾರ 10 ಸಾವಿರ ರಜಾ ದಿನಗಳು 5 ಸಾವಿರ ರಥೋತ್ಸವ ದಿನದಂದು 30 ಮತ್ತು ಇತರೆ ವಿಶೇಷ ದಿನಗಳಂದು 6 ಸಾವಿರ ಭಕ್ತಾಧಿಗಳು ಭೇಟಿ ನೀಡಲಿದ್ದಾರೆ ಎಂದರು.
ಘಾಟಿ ದೇವಾಲಯಕ್ಕೆ ವಾರ್ಷಿಕವಾಗಿ ಸರಾಸರಿ ರೂ. 12.25 ಕೋಟಿ ರೂಪಾಯಿಗಳ ಆದಾಯ ದೇವಾಲಯಕ್ಕೆ ಬರುತ್ತಿದ್ದು, ರಾಜ್ಯದ ಮುಜರಾಯಿ ದೇವಾಲಯಗಳಿಗೆ ಬರುವ ಆದಾಯವನ್ನು ಸರ್ಕಾರಕ್ಕೆ ಜಮೆ ಮಾಡಲಾಗುವುದಿಲ್ಲ. ಬದಲಾಗಿ ದೇವಾಲಯಗಳಲ್ಲಿ ಸಂಗ್ರಹವಾಗುವ ಆದಾಯ ವನ್ನು ಆಯಾ ದೇವಾಲಯಗಳ ಸಿಬ್ಬಂದಿ ವೇತನ, ದಿನನಿತ್ಯದ ಪೂಜೆ, ವಿಶೇಷ ಪೂಜೆ, ರಥೋತ್ಸವ ಹಾಗೂ ಉಳಿದ ಹಣವನ್ನು ದೇವಾಲಯದ ಅಭಿವೃದ್ಧಿಗಾಗಿ ಬಳಸಲಾಗುತ್ತದೆ ಎಂದು ಹೇಳಿದರು
ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ದರ್ಶನಕ್ಕಾಗಿ ಬರುವ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಅನುಕೂಲಕ್ಕಾಗಿ ಸರತಿ ಸಾಲಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಾಹನ ನಿಲ್ದಾಣ, ವಸತಿ ಗೃಹಗಳು, ಶೌಚಾಲಯ, ಮುಡಿ ಭವನ, ದಾಸೋಹದಂತಹ ಮೂಲಭೂತ ಸೌಕರ್ಯ ಗಳನ್ನು ಒದಗಿಸಲಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುತ್ತದೆ ಎಂದು ತಿಳಿಸಿದರು.