ಬೆಂಗಳೂರು – ರಾಜಧಾನಿ ಬೆಂಗಳೂರಿನಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ತ್ವರಿತವಾಗಿ ತಲುಪಬೇಕು ಎಂದು ನಿರ್ಮಾಣ ಮಾಡಿರುವ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ (Bengaluru-Mysuru Highway) ಇದೀಗ ದರೋಡೆಕೋರರ ಆವಾಸ ಸ್ಥಾನವಾಗಿದೆ.
ಈ ಸಂಬಂಧ ವರದಿಯಾದ ಹಲವು ಪ್ರಕರಣಗಳನ್ನು ಆಧರಿಸಿ ಪೊಲೀಸ್ ಪ್ಯಾಟ್ರೋಲಿಂಗ್ ಹೆಚ್ವಿಸಿದ್ದರೂ ಕಳ್ಳರ ಹಾವಳಿ ಕಡಿಮೆಯಾಗಿಲ್ಲ.
ಕಳ್ಳರ ಹಾವಳಿ ನಿಯಂತ್ರಣ ಮಾಡಲುದಶಪಥದ ಹಲವು ಕಡೆ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ಹೊಯ್ಸಳ ವಾಹನಗಳು ಗಸ್ತು ತಿರುಗುತ್ತವೆ. ಆದರೂ ಸಮಯ ಸಾಧಿಸಿ ದರೋಡೆ ಮಾಡುತ್ತಿರುವುದು ಕಂಡುಬರುತ್ತಿದೆ.
ನಾಲ್ಕು ತಿಂಗಳ ಹಿಂದೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಗೆಳೆಯರ ಜತೆ ಹೋಗುತ್ತಿದ್ದ ರಾಮನಗರದ ಯುವಕನೊಬ್ಬನ ಕೊಲೆಯಾಗಿತ್ತು. ಜತೆಗಿದ್ದ ಯುವಕರಿಗೂ ತಿಳಿಯದಂತೆ ನಡೆದಿರುವ ಈ ಭೀಕರ ಕೃತ್ಯದ ಹಿಂದೆ ಹೆದ್ದಾರಿ ದರೋಡೆಕೋರರ ಪಾತ್ರವಿದೆಯೇ ಎಂಬ ಆತಂಕ ಮೂಡಿತ್ತು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರದಲ್ಲಿ ಬೈಕ್ ನಿಲ್ಲಿಸಿದ್ದ ಯುವಕರ ಮೇಲೆ ಒಂದು ಗ್ಯಾಂಗ್ ದಾಳಿ ನಡೆಸಿತ್ತು.
ಇದರ ಬೆನ್ನಲ್ಲೇ ಇದೀಗ ಕಾರು ಪ್ರಯಾಣಿಕರಿಗೆ ಲಾಂಗ್ ತೋರಿಸಿ ದುಷ್ಕರ್ಮಿಗಳು 9.13 ಲಕ್ಷ ಮೌಲ್ಯದ 166 ಗ್ರಾಂ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವ ದುರ್ಘಟನೆ ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿ ಘಟನೆ ನಡೆದಿದೆ.
ಹಿಮಾಚಲಂ ಹಾಗೂ ಅಂಕಯ್ಯ ಎಂಬವರು ಕಾರಿನಲ್ಲಿ ಚನ್ನಪಟ್ಟಣದಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ನಿದ್ರೆ ಮಂಪರು ಬಂದಿದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕ ಮಾಯಗಾನಹಳ್ಳಿ ಬ್ರಿಡ್ಜ್ ಕೆಳಗೆ ಕಾರು ನಿಲ್ಲಿಸಿಕೊಂಡು ಮುಖ ತೊಳೆಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ ಬೆದರಿಸಿ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.