ಬೆಂಗಳೂರು, ಮಾ.5- ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ವಿಧಾನಸೌಧದಲ್ಲಿ ನಡೆದ ವಿಜಯೋತ್ಸವ ವೇಳೆ ಕೇಳಿ ಬಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಇದೀಗ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ (Naseer Hussain) ಅವರಿಗೆ ತೊಡಕಾಗುವ ಸಾಧ್ಯತೆ ಇದೆ.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರಲ್ಲಿ ಒಬ್ಬ ಆರೋಪಿ ಪಾಕಿಸ್ತಾನ್ ಎಂದು ಕೂಗಿದರೆ ಇನ್ನಿಬ್ಬರು ಜಿಂದಾಬಾದ್ ಎಂದು ಹೇಳಿರುವುದು ಧೃಡಪಟ್ಟಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಬಂದ ನಂತರ ಮೂವರನ್ನು ಪೊಲೀಸರು ಬಂಧಿಸಿದ್ದು ಈ ಮೂವರು ವಿಧಾನಸೌಧ ಪ್ರವೇಶಿಸಲು ನಾಸಿರ್ ಹುಸೇನ್ ಪಾಸ್ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ನಾಸಿರ್ ಹುಸೇನ್ ವಿರುದ್ಧವು ಪ್ರಕರಣ ದಾಖಲಿಸುವ ಸಂಬಂಧ ಪರಿಶೀಲನೆ ನಡೆಸಿದ್ದಾರೆ.
ಪ್ರಮಾಣವಚನ ಬೇಡ:
ಮತ್ತೊಂದೆಡೆ ಬೆಳಗಾವಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪೊಲೀಸರು ತಕ್ಷಣವೇ ನಾಸಿರ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿರುವುದು ಅತ್ಯಂತ ಆಕ್ಷಮ್ಯ ಅಪರಾಧ ಇಂತಹ ಅಪರಾಧ ಎಸಗಿರುವ ಪಾತಕಿಗಳು ನಾಸಿರ್ ಹುಸೇನ್ ಅವರ ಬೆಂಬಲಿಗರು ಎಂದು ಗುರುತಿಸಲಾಗಿದೆ ಈ ಹಿನ್ನೆಲೆಯಲ್ಲಿ ನಾಸೀರ್ ಹುಸೇನ್ ವಿರುದ್ಧವು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಈ ಕುರಿತಂತೆ ನಾಸಿರ್ ಹುಸೇನ್ ವಿರುದ್ಧ ತನಿಖೆ ಪೂರ್ಣಗೊಳ್ಳುವವರೆಗೆ ಅವರು ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಬಾರದು ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದು ಎಂದು ರಾಜ್ಯಸಭೆಯ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪಾತ್ರ ಬರೆಯಲಾಗುವುದು ಎಂದು ತಿಳಿಸಿದರು.
ಪ್ರಕರಣದ ಕುರಿತಂತೆ ಎಫ್ ಎಸ್ ಎಲ್ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಈ ಪ್ರಕರಣದಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಎಲ್ಲರನ್ನೂ ಬಂಧಿಸಬೇಕು ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗುವವರೆಗೆ ನಾಸೀರ್ ಹುಸೇನ್ ಅವರು ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಒತ್ತಡಕ್ಕೆ ಮಣಿಯುವುದಿಲ್ಲ:
ಈ ಬೆಳವಣಿಗೆಗಳ ನಡುವೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್ ಇದೊಂದು ಅಕ್ಷಮ್ಯ ಅಪರಾಧ ಇದರಲ್ಲಿ ಯಾವುದೇ ವ್ಯಕ್ತಿ ಶಾಮೀಲಾಗಿದ್ದರೂ ಅವರನ್ನು ಕ್ಷಮಿಸುವುದಿಲ್ಲ. ಕಾನೂನು ಪ್ರಕಾರ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಇದೊಂದು ಸೂಕ್ಷ್ಮ ವಿಚಾರವಾಗಿದೆ ಸರ್ಕಾರ ಯಾವುದೇ ಕಾರಣಕ್ಕೂ ದುಡುಕಿ ತೀರ್ಮಾನ ಕೈಗೊಳ್ಳುವುದಿಲ್ಲ ಯಾವುದೇ ಒತ್ತಡಕ್ಕೂ ಮಡೆಯುವುದಿಲ್ಲ ಎಫ್ ಎಸ್ ಎಲ್ ವರದಿ ಬಂದ ತಕ್ಷಣವೇ ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೂ ತನಿಖೆ ಮುಂದುವರೆದಿದ್ದು ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದ್ದೇವೆ ಎಂದು ತಿಳಿದರು.