ಬೆಂಗಳೂರು.ಏ.4: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಭಿನ್ನಮತ ದೊಡ್ಡ ಸವಾಲಾಗಿದೆ.
ಬಿಕ್ಕಟ್ಟು ಶಮನದ ಅಖಾಡಕ್ಕೆ ಪಕ್ಷದ ಹೈಕಮಾಂಡ್ ಧುಮುಕಿದೆ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಅಪಸ್ವರ ಎತ್ತಿರುವ ಹಲವು ನಾಯಕರನ್ನು ಸಂಪರ್ಕಿಸಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸೂಚಿಸುತ್ತಿದ್ದಾರೆ.
ಅಮಿತ್ ಶಾ ಅವರ ಮನವಿ ಮತ್ತು ಸಲಹೆಗೆ ಸಮ್ಮತಿಸಿರುವ ಕೊಪ್ಪಳ ಬೀದರ್, ಬೆಳಗಾವಿ , ದಾವಣಗೆರೆ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಭಿನ್ನಮತಿಯ ನಾಯಕರು ತಮ್ಮ ಮುನಿಸು ಮರೆತು ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.
ಆದರೆ ಬೆಂಗಳೂರು ಕಾರವಾರ ಶಿವಮೊಗ್ಗ ತುಮಕೂರು ಮತ್ತು ರಾಯಚೂರು ಲೋಕಸಭಾ ಕ್ಷೇತ್ರದ ಬಂಡುಕೋರರು ಅಮಿತ್ ಶಾ ಅವರ ಸಲಹೆಗೆ ಸೊಪ್ಪು ಹಾಕದೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಯಾವುದೇ ರೀತಿಯ ಪ್ರಚಾರದಲ್ಲಿ ತೊಡಗದೆ ಮೌನಕ್ಕೆ ಶರಣಾಗಿದ್ದಾರೆ ಹಿರಿಯ ನಾಯಕರಾ ಈ ತಟಸ್ಥ ನಿಲುವು ಬಿಜೆಪಿ ಅಭ್ಯರ್ಥಿಗಳಿಗೆ ದೊಡ್ಡ ತಲೆನೋವು ತಂದೊಡ್ಡಿದೆ.
ಬೆಳಗಾವಿಯ ಅಧಿಕೃತ ಅಭ್ಯರ್ಥಿಯ ಜಗದೀಶ್ ಶೆಟ್ಟರ್ ಪರವಾಗಿ ಕೆಲಸ ಮಾಡುವಂತೆ ಮಾಜಿ ಸಂಸದ ಪ್ರಭಾಕರ ಕೋರೆ ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿ ಮಠ ಮಾಜಿ ಶಾಸಕ ಸಂಜಯ ಪಾಟೀಲ್, ಸೇರಿದಂತೆ ಹಲವರಿಗೆ ಪಕ್ಷ ನೀಡಿರುವ ಸೂಚನೆ ಯಾವುದೇ ಪರಿಣಾಮ ಬೀರಿಲ್ಲ ಈ ನಾಯಕರು ತಮ್ಮ ನಿಲುವಿಗೆ ಬಲವಾಗಿ ಅಂಟಿಕೊಂಡಿದ್ದಾರೆ.
ಮತ್ತೊಂದೆಡೆ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಶಾಸಕ ಅಭಯ ಪಾಟೀಲ್ ಅವರುಗಳು ಪಕ್ಷದ ಸೂಚನೆಯನ್ನು ಪಾಲಿಸುತ್ತೇವೆ ಎಂದು ತಿಳಿಸಿದರು ಇನ್ನೂ ಸಕ್ರಿಯವಾಗಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ತೊಡಗಿಲ್ಲ ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರು ಪಕ್ಷದ ನಾಯಕ ಅಮಿತ್ ಶಾ ಸೂಚನೆ ಪಾಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಅವರ ನಿಲುವು ಏನು ಎಂಬ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ ಇದು ಜಗದೀಶ್ ಶೆಟ್ಟರ್ ಅವರಿಗೆ ದೊಡ್ಡ ತಲೆನೋವು ತಂದೊಡ್ಡಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಮಾಜಿ ಸಚಿವ ಅನಂತಕುಮಾರ್ ಹೆಗಡೆ ತಮ್ಮ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ ಅಮಿತ್ ಷಾ ಹೇಳಿದ ಎಲ್ಲ ಮಾತುಗಳನ್ನು ಕೇಳಿಸಿಕೊಂಡಿರುವ ಅವರು ಇಲ್ಲಿವರೆಗೆ ತಮ್ಮ ನಿಲುವು ಪ್ರಕಟಿಸಿಲ್ಲ ಅಷ್ಟೇ ಅಲ್ಲ ತಮ್ಮ ಬೆಂಬಲಿಗರಿಗೂ ಯಾವುದೇ ಸೂಚನೆ ನೀಡದಿರುವುದು ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಚಿಂತೆಗೀಡು ಮಾಡಿದೆ.
ರಾಯಚೂರಿನಲ್ಲೂ ಭಿನ್ನಮತ ಬಗೆ ಹರಿದಿಲ್ಲ. ಮಾಜಿ ಸಂಸದ ಬಿವಿ ನಾಯಕ್ ಅವರು ಪಕ್ಷದ ಸಭೆಗಳಿಂದ ದೂರ ಉಳಿದಿದ್ದಾರೆ ಅವರನ್ನು ಸಂಪರ್ಕಿಸಲು ಹೈಕಮಾಂಡ್ ಮೂಲಕ ಅಭ್ಯರ್ಥಿ ರಾಜ ಅಮರೇಶ್ವರ ನಾಯಕ್ ಮಾಡಿದ ಪ್ರಯತ್ನ ವಿಫಲವಾಗಿದೆ.
ಮೊದಲೇ ಯಡಿಯೂರಪ್ಪನವರ ಕುಟುಂಬದ ವಿರುದ್ಧ ಕೊತಕೊತ ಕುದಿಯುತ್ತಿರುವ ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಈಗ ಮತ್ತಷ್ಟು ಗರಂ ಆಗಿದ್ದಾರೆ. ದೆಹಲಿಗೆ ಬರುವಂತೆ ಸೂಚಿಸಿದ್ದ ಅಮಿತ್ ಶಾ, ಅವರನ್ನು ಭೇಟಿ ಮಾಡದೇ ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಸಭೆಗೆ ಆಗಮಿಸಿದ್ದ ಅಮಿತ್ ಶಾ, ಈಶ್ವರಪ್ಪ ಅವರ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈಶ್ವರಪ್ಪನವರ ಸಿಟ್ಟು ತಣ್ಣಗಾಗದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ಬರುವಂತೆ ಸೂಚಿಸಿದ್ದರು ಸೂಚನೆಯ ಮೇರೆ ಈಶ್ವರಪ್ಪ ನಿನ್ನೆ ಬೆಳಗ್ಗೆ ದೆಹಲಿಗೆ ಪ್ರಯಾಣಿಸಿದ್ದರು. ಆದರೆ, ಇಡೀ ದಿನ ಕಾದರೂ ಅಮಿತ್ ಶಾ ದರ್ಶನ ಸಿಗದೇ ರಾಜ್ಯಕ್ಕೆ ಈಶ್ವರಪ್ಪ ವಾಪಸ್ಸಾಗಿದ್ದಾರೆ.
ಅಷ್ಟೇ ಅಲ್ಲ ತಾವು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವುದು ಪಕ್ಷದ ನಿಲುವಾಗಿದೆ ಅದಕ್ಕಾಗಿಯೇ ಅಮಿತ್ ಶಾ ತಮ್ಮನ್ನು ಭೇಟಿಯಾಗಿಲ್ಲ ಎಂದು ಹೇಳಿರುವ ಈಶ್ವರಪ್ಪ ಅವರ ಸವಾಲು ಸಂಸದ ರಾಘವೇಂದ್ರ ಅವರಿಗೆ ದೊಡ್ಡ ಸಮಸ್ಯೆ ತಂದೊಡ್ಡುವ ಸಾಧ್ಯತೆಗಳಿವೆ.
ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಸದಾನಂದ ಗೌಡ ಅವರು ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯಲು ಬಯಸಿದರು ಆದರೆ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದೆ ಈ ಹಿನ್ನೆಲೆಯಲ್ಲಿ ಬಂಡಾಯದ ಬಾವುಟ ಹಾರಿಸಲು ಯತ್ನಿಸಿದ ಅವರು ಅಂತಿಮವಾಗಿ ಸುಮ್ಮನಾದರು ಪಕ್ಷದ ಅಭ್ಯರ್ಥಿ ಪರವಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿಲ್ಲ.
ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಖುದ್ದಾಗಿ ಸದಾನಂದ ಗೌಡ ಅವರನ್ನು ಸಂಪರ್ಕಿಸಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರೂ ಸದಾನಂದ ಗೌಡ ಇನ್ನು ಕೂಡ ಅಖಾಡಕ್ಕೆ ತಲುಪಿಲ್ಲ ಅಷ್ಟೇ ಅಲ್ಲ ತಮ್ಮ ಬೆಂಬಲಿಗರಿಗೂ ಯಾವುದೇ ಸೂಚನೆಯನ್ನು ನೀಡಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಶಕ್ತಿ ಕೇಂದ್ರ ಪ್ರಮುಖರ ಸಭೆಯಿಂದಲೂ ದೂರ ಉಳಿದ ಸದಾನಂದ ಗೌಡ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಇಲ್ಲಿಯವರೆಗೆ ಯಾವುದೇ ಪ್ರಚಾರದಲ್ಲಿ ತೊಡಗಿಲ್ಲ.
ಇವರನ್ನು ಸಂಪರ್ಕಿಸಿದ ಅಮಿತ್ ಶಾ ವೈಮನಸ್ಯ ಮರೆತು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ನೀಡಿದ ಸೂಚನೆಗೆ ಸದಾನಂದ ಗೌಡ ಸಮ್ಮತಿ ವ್ಯಕ್ತಪಡಿಸಿದರೂ ಇಲ್ಲಿಯವರೆಗೆ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ತೊಡಗಿಲ್ಲ.
ತುಮಕೂರಿನಲ್ಲೂ ಮಾಜಿ ಸಚಿವ ಮಾಧುಸ್ವಾಮಿ ತಮ್ಮ ನಿಲುವು
ಒಟ್ಟಾರೆ ಅಮಿತ್ ಶಾ ಅವರ ಮಧ್ಯ ಪ್ರವೇಶದ ನಂತರವೂ ಬಿಜೆಪಿಯಲ್ಲಿ ಉಂಟಾಗಿರುವ ಅಪಸ್ವರ ಮರೆಯಾಗಿಲ್ಲ.